Donnere villagers pray for rain 
ರಾಜ್ಯ

ಮಳೆಗಾಗಿ ದೊಣ್ಣೆರೆ ಗ್ರಾಮಸ್ಥರ ಪ್ರಾರ್ಥನೆ

ಗುಬ್ಬಿ: ಉರಿ ಬಿಸಿಲಿಗೆ ತಗ್ಗಿದ ಅಂತರ್ಜಲದಿಂದ ಕೃಷಿ ಚಟುವಟಿಕೆ ವಾಡಲಾಗದೆ ಬೇಸತ್ತ ಕಡಬ ಹೋಬಳಿ ದೊಣ್ಣೆರೆ ಗ್ರಾಮಸ್ಥರು ಮಳೆರಾಯನ ಮಣ್ಣಿನಮೂರ್ತಿ ತಯಾರಿಸಿ ಊರಿನಲ್ಲಿ ಮೆರವಣಿಗೆ ನಡೆಸಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಪ್ರಾರ್ಥಿಸಿದರು.
ದೊಣ್ಣೆರೆ ಊರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಊರಿನ ಒಟ್ಟು 90 ಮನೆಯವರು ಸೇರಿ ಹಸಿರು ತೋರಣದಿಂದ ಸಿಂಗಾರಿಸಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ವರುಣನ ಕೃಪೆಗೆ ಮಳೆರಾಯನಮೂರ್ತಿ ಹೊತ್ತು ವಾದ್ಯಗಳೊಂದಿಗೆ ಪ್ರತಿ ಮನೆಗೆ ತೆರಳಿ ಪೂಜೆ ಸ್ವೀಕರಿಸಿ ನೀರಿನ ಅಭಿಷೇಕ ಪಡೆದು ಹುಯ್ಯೋ... ಹುಯ್ಯೋ.. ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ, ಬಾಳೆ ತೋಟಕ್ಕೆ ನೀರಿಲ್ಲ ಎಂದು ಕೂಗುತ್ತಾ ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸಿದ್ದಾರೆ.
ಊರಿನ ಎಲ್ಲ ಮನೆಗಳಿಂದ ಪೂಜಿಸಿ ನಂತರ ದೇವಾಲಯದ ಆವರಣಕ್ಕೆ ಮೆರವಣಿಗೆ ತಲುಪಿತು. ಗ್ರಾಮದೇವರಿಗೆ ಪೂಜೆ ಸಲ್ಲಿಸಿ ಎಲ್ಲರಿಗೂ ದಾಸೋಹ ವ್ಯವಸ್ಥೆಯನ್ನು ಗ್ರಾಮಸ್ಥರೇ ವಾಡಿದ್ದರು.