ಬೆಂಗಳೂರು: ( dolly dhananjay) ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ಮನೆಮಾಡಿದೆ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಮತ್ತು ಅವರ ಪತ್ನಿ ಧನ್ಯತಾ, ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಧನಂಜಯ್ ಅವರು ಖಾಸಗಿವಾಹಿನಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ತಾವು ತಂದೆ ಆಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಸ್ಟೇಜ್ ಮೇಲೆ ಆಗಮಿಸಿದ್ದ ಡಾಲಿ ಧನಂಜಯ್ ಅವರು ಒಂದು ಗುಲಾಬಿ ಹೆಂಡತಿಗೆ, ಮತ್ತೊಂದು ನನ್ನ ಅಪ್ಪ ಅಂತ ಕರಿಯೋಕೆ ಬರುತ್ತಿರುವ ಮಗುಗೆ ಎಂದು ಹೇಳೋ ಮೂಲಕ ತಾವು ಪೋಷಕರು ಆಗುತ್ತಿರುವ ಸಿಹಿಸುದ್ದಿನ ಹೇಳಿದ್ದಾರೆ.
ಇತ್ತೀಚೆಗೆ ಧನಂಜಯ್ ಮತ್ತು ಧನ್ಯತಾ ಟ್ರಿಪ್ಗೆ ಹೋಗಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಧನ್ಯತಾ ಅವರ ಬೇಬಿ ಬಂಪ್ ಎದ್ದು ಕಾಣುತ್ತಿದೆ. ತಮ್ಮ ನೆಚ್ಚಿನ ನಟ ತಂದೆಯಾಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ವೃತ್ತಿಜೀವನದಲ್ಲಿ ಸತತ ಸಿನಿಮಾಗಳ ಮೂಲಕ ಬ್ಯುಸಿಯಾಗಿರುವ ಧನಂಜಯ್, ವೈಯಕ್ತಿಕ ಜೀವನದಲ್ಲೂ ಈ ಮಧುರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದಾರೆ.
ಬಹುಕಾಲದ ಗೆಳತಿ ಧನ್ಯತಾ ಅವರನ್ನು ಕಳೆದ ವರ್ಷವಷ್ಟೇ ಧನಂಜಯ್ ವಿವಾಹವಾಗಿದ್ದರು. ಇದೀಗ ಈ ದಂಪತಿ ಬದುಕಿಗೆ ಹೊಸ ಅತಿಥಿಯ ಆಗಮನವಾಗುತ್ತಿರುವುದು ಅವರ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.