ದೊಡ್ಡಬಳ್ಳಾಪುರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೇಕಾರರ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ನಗರಸಭಾ ಸದಸ್ಯರಾದ ಚಂದ್ರಮೋಹನ್​, ಅಖಿಲೇಶ್​, ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತ್​ ರಾಜ್​, ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವ ನಾಯಕ್​, ರಾಜ್ಯ ನೇಕಾರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಆರ್​.ಎಸ್​.ಶ್ರೀನಿವಾಸಲು, ಖಜಾಂಚಿ ಕೆ.ಮಲ್ಲೇಶ್​, ಟಿಎಂಸಿ ಬ್ಯಾಂಕ್​ ನಿರ್ದೇಶಕ ಕೆ.ಜಿ.ಗೋಪಾಲ್​ ಇದ್ದರು.  
ರಾಜ್ಯ

ಮಾಸಾಂತ್ಯಕ್ಕೆ ದೊಡ್ಡಬಳ್ಳಾಪುರ ಬಂದ್​ / DODDABALLAPUR

ದೊಡ್ಡಬಳ್ಳಾಪುರ : ಸೂರತ್​ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸುವಂತೆ ಆಗ್ರಹಿಸಿ ನೇಕಾರರಿಂದ ಮಾಸಾಂತ್ಯದಲ್ಲಿ ದೊಡ್ಡಬಳ್ಳಾಪುರ ಬಂದ್​ ಮಾಡಲು ನಿರ್ಧರಿಸಲಾಗಿದೆ ಎಂದು ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್​ ತಿಳಿಸಿದರು.
ನಗರದ ಖಾಸಗಿ ಸಭಾಂಗಣದಲ್ಲಿ ನೇಕಾರ ಸಂಘಟನೆಗಳ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ವತಿಯಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಅನ್ಯ ರಾಜ್ಯಗಳ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ನೇಕಾರರು ಸೂರತ್​ನಿಂದ ದೊಡ್ಡಬಳ್ಳಾಪುರಕ್ಕೆ ಬಂದ ಸೀರೆಗಳ ಟ್ರಕ್​ ತಡೆಯುವ ಮೂಲಕ ಉದ್ಯಮಕ್ಕೆ ಮಾರಕ ಎಂಬ ಸರ್ಕಾರಕ್ಕೆ ಸಂದೇಶ ನೀಡಿದರು.
ಈ ಹಿಂದೆ ಪ್ರತಿಭಟನೆ ಮಾಡಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಜಾಸ್ತಿ ಆಗುತ್ತಲೇ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ. ಸಂಸದರು ದಿನಾಂಕ ತಿಳಿಸಿದ ಕೂಡಲೇ ನೇಕಾರರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಾಗಿದೆ. ಇನ್ನೂ ತಿಂಗಳ ಅಂತ್ಯದಲ್ಲಿ ದೊಡ್ಡಬಳ್ಳಾಪುರ ಬಂದ್​ಗೆ ತೀಮಾರ್ನಿಸಲಾಗಿದ್ದು, ದಿನಾಂಕ ನಿಗದಿಪಡಿಸಲಾಗುತ್ತದೆ ಎಂದರು.
ಹೊಸಕೋಟೆ ನೇಕಾರರ ಮುಖಂಡ ಎಂ.ವೆಂಕಟರಾಜು, ದೇವನಹಳ್ಳಿ ಜಿ.ರಂಗಸ್ವಾಮಿ, ವಿಜಯಪುರದ ಮುಖಂಡ ಸುರೇಶ್​, ಗೊಟ್ಟಿಗೆರೆ ಸೂರಿ, ಆನೇಕಲ್​ ದೇವರಾಜ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಅನಂತಯ್ಯ, ನೇಕಾರ ಮುಖಂಡರಾದ ಸುರೇಶ್​ ಸಿ.ಎಂ.ಮುನಿರಾಜು, ಎಮ್​.ಚೌಡಯ್ಯ, ಕೆ.ರಘುಕುಮಾರ್​, ದೃವಕುಮಾರ್​, ಅನಿಲ್​, ಸುರೇಶ್​ ಬಾಬು, ಎನ್​.ಆರ್​.ಸುರೇಶ್​, ಭಾಸ್ಕರ್​ ಇತರರು ಇದ್ದರು.
ಹೋರಾಟದಿಂದ ಯಶಸ್ಸು : ಯಾರು ಸೀರೆಗಳನ್ನು ತಂದು ಮಾರುತ್ತಾರೆ ಅವರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಸೋಣ. ಹೋರಾಟದಿಂದ ಯಶಸ್ಸು ಸಾಧ್ಯ. ಕಳೆದ ವಾರದಲ್ಲಿ ಜವಳಿ ಸಚಿವರೊಂದಿಗೂ ಸಭೆ ನಡೆಸಲಾಯಿತು. ದೊಡ್ಡಬಳ್ಳಾಪುರದ ಸೀರೆಗಳಿಗೆ ಜಿಐ ಟ್ಯಾಗ್​ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾರುಕಟ್ಟೆಗೂ ಪ್ರಯತ್ನಿಸಲಾಗುತ್ತದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ನೇಯ್ದ ಸೀರೆಗಳನ್ನೇ ನೀಡಿ : ರಾಜ್ಯದಲ್ಲಿನ ಅಂಗನವಾಡಿ, ಬಿಸಿಯೂಟ ನೌಕರರಿಗೆ, ನರ್ಸ್​ಗಳಿಗೆ, ಪೌರಕಾರ್ಮಿಕರಿಗೆ ಸಮವಸ್ತ್ರ ನೇಕಾರರ ನೇಯ್ದ ಸೀರೆಗಳನ್ನೇ ನೀಡಬೇಕು. ಇದರಿಂದ ನೇಕಾರರಿಗೆ ಅನುಕೂಲವಾಗುತ್ತದೆ. ನೇಯ್ಗೆ ಉದ್ಯಮದ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಹುಡುಕಿಕೊಳ್ಳಬೇಕು. ದೊಡ್ಡಬಳ್ಳಾಪುರ ಸೀರೆಗಳಿಗೆ ಜಿಐ ಟ್ಯಾಗ್​ ಪಡೆಯಲು ಅವಕಾಶವಿದೆ. ವಿವಿಧ ಕಡೆಗಳಲ್ಲಿ ಜಿಐ ಟ್ಯಾಗ್​ ಪಡೆದಿದ್ದಾರೆ. ಗ್ರಾಮಾಂತರದ ಕೃಷಿ ಭೂಮಿ ವಶಪಡಿಸಿಕೊಂಡು ಕೈಗಾರಿಕೆಗಳಿಗೆ ಧಾರೆ ಎರೆದಿದ್ದಾರೆ. ಸ್ಥಳಾವಕಾಶ ನೀಡಿ ನೇಕಾರರಿಗೆ ಶೆಡ್​ಗಳನ್ನು ಮಾಡಿ ಅಗತ್ಯ ವಿದ್ಯುತ್​ ಪೂರೈಸಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷ ಎಂ.ಎಸ್​.ಮೀನಾಕ್ಷಿ ಸುಂದರಂ ಹೇಳಿದರು.