ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಏ. 23ರಂದು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಸಮಿತಿ ಸ್ಥಾಪಿಸಿ ಆದೇಶಿಸಲಾದ ತನಿಖೆಯಲ್ಲಿ, ಆಸ್ಪತ್ರೆಯ ಚಿಕಿತ್ಸೆಗೂ 45 ವರ್ಷದ ರೋಗಿಯ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿ ಹೇಳಿದೆ.
ರೋಗಿಯ ಕುಟುಂಬವು ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಮಾಡಿದ ಆರೋಪದ ಹಿನ್ನೆಲೆ ಸಮಿತಿ ರಚಿಸಿ ತನಿಖೆ ಸೂಚಿಸಲಾಗಿತ್ತು. ವಿತರಣಾ ಕೆಲಸಗಾರನಾಗಿದ್ದ ರೋಗಿಯು ಫೆ.19ರಂದು ಜನನಾಂಗದ ಪ್ರದೇಶದಲ್ಲಿ ಊತದಿಂದ ಚಿಕಿತ್ಸೆಗೆ ದಾಖಲಾಗಿದ್ದರು ಮತ್ತು ನಂತರ ಫೋರ್ನಿಯರ್ಸ್ ಗ್ಯಾಂಗ್ರೀನ್ ಜತೆಗೆ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದ. ಕಾರ್ಯವಿಧಾನಗಳಿಗೆ ಒಳಪಟ್ಟು ಪ್ಲಾಸ್ಟಿಕ್ ಸರ್ಜರಿಗೆ ಸೂಚಿಸಲಾಗಿತ್ತು. ಆದರೆ, ಸರಿಯಾದ ಚಿಕಿತ್ಸೆ ನಡೆಸದೆ ಶಸಚಿಕಿತ್ಸೆ ಮಾಡಿ ಹೊಲಿಗೆ ಹಾಕದೆ ರಕ್ತಸ್ರಾವದ ನಡುವೆಯೇ ರೋಗಿಯನ್ನು ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಪತಿಯು ನರಳಿ ಪ್ರಾಣ ಬಿಟ್ಟರು ಎಂದು ಪತ್ನಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಾವಿಗೆ ಕಾರಣ ತಿಳಿಯಲು ತಜ್ಞರ ಸಮಿತಿ ರಚಿಸಲಾಗಿತ್ತು. ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡ ವಿಚಾರಣಾ ಸಮಿತಿಯು ವೈದ್ಯಕೀಯ ದಾಖಲೆಗಳು, ಚಿಕಿತ್ಸಾ ಪಟ್ಟಿಗಳು ಮತ್ತು ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಹೇಳಿಕೆಗಳನ್ನು ಪಡೆದಿತ್ತು. ಕೊನೆಗೆ ರೋಗಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಆಸ್ಪತ್ರೆಯ ಚಿಕಿತ್ಸೆ ಮತ್ತು ಸಾವಿನ ನಡುವೆ ವೈದ್ಯರ ನಿರ್ಲಕ್ಷ್ಯ ಸೇರಿ ಯಾವುದೇ ನೇರ ಸಂಬಂಧ ಕಂಡುಬಂದಿಲ್ಲ ಎಂದು ವರದಿ ನೀಡಿದೆ.