ಮೂಳೆ ತಜ್ಞ ಹಾಗೂ ರೋಬಾಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜನ್ ಡಾ. ಎ. ರವಿರಾಜ್  
ರಾಜ್ಯ

ಡಾಕ್ಟರ್ಸ್​​ ಡೇ: ಮಂಡಿನೋವು ನಿರ್ಲಕ್ಷ್ಯ ಬೇಡ ಅರಿವಿರಲಿ; ಡಾ. ಪ್ರೊ. ಎ. ರವಿರಾಜ್ | Doctor's Day

ವೇಗದ ಬದುಕಿನಲ್ಲಿ ಒತ್ತಡಸಹಿತ ಬದಲಾದ ಜೀವನಶೈಲಿಯಿಂದ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಿದ್ದು, ಇತ್ತೀಚಿನ ವರ್ಷಗಳಲ್ಲಿ ಮಂಡಿನೋವು ಸೇರಿ ಸಂಧಿವಾತ (ಆರ್ಥರೈಟಿಸ್) ಕಾಯಿಲೆ ಜನರನ್ನು ಹೆಚ್ಚು ಬಾಧಿಸುತ್ತಿದೆ. ಈ ನಿಟ್ಟಿನಲ್ಲಿ ಸಂಧಿವಾತಕ್ಕೆ ಕಾರಣಗಳು, ರೋಗ ಲಕ್ಷಣಗಳು, ಲಭ್ಯವಿರುವ ಚಿಕಿತ್ಸೆ, ಆಧುನಿಕ ತಂತ್ರಜ್ಞಾನ ಬಳಕೆಯ ಪರಿಣಾಮಗಳು, ವೈದ್ಯಕೀಯ ಸೌಲಭ್ಯಗಳ ಕುರಿತು ಅಪೊಲೋ ಆಸ್ಪತ್ರೆಯ ಹಿರಿಯ ಕೀಲು, ಮೂಳೆ ತಜ್ಞ ಹಾಗೂ ರೋಬಾಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜನ್ ಡಾ. ಎ. ರವಿರಾಜ್ ಅವರು ‘ವಿಜಯವಾಣಿ’ ನಡೆಸಿದ ಸಂವಾದದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದೇಹದ ಪ್ರತಿರಕ್ಷಣಾ ಕಾಯಿಲೆಗಳಲ್ಲಿ ಮಂಡಿನೋವು ಸೇರಿ ಸಂಧಿವಾತ (ಆರ್ಥರೈಟಿಸ್) ಕಾಯಿಲೆ ಪ್ರಮುಖವಾಗಿದೆ. ಹಿಂದೆ 60- 70 ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತಿದ್ದ ಕೀಲು ಸಮಸ್ಯೆ ಇಂದು 50-60ರ ಆಸುಪಾಸಿನವರನ್ನು ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರನ್ನೂ ಬಾಧಿಸುತ್ತಿದೆ. ಹಾಗೆಂದು ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ಸಂಧಿವಾತ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳದೆ ಲಭ್ಯವಿರುವ ಆಧುನಿಕ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಈ ಹಿನ್ನೆಲೆ ಜನರಲ್ಲಿ ಅರಿವಿನ ಅಗತ್ಯವಿದೆ.
ಸಂಧಿವಾತ ಸಮಸ್ಯೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಲಭ್ಯವಿದೆ. ಆದರೆ ನಿರ್ಲಕ್ಷ್ಯ, ಆರ್ಥಿಕ ಸಮಸ್ಯೆ ಹಾಗೂ ಅರಿವಿನ ಕೊರತೆಯಿಂದಾಗಿ ಬಹುಪಾಲು ಮಂದಿ ನೋವಿನಲ್ಲೇ ದಿನ ದೂಡುತ್ತಾರೆ. ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಯ ಮೊರೆಹೋಗುತ್ತಾರೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಉತ್ತಮ ಪರಿಣಾಮ ಸಾಧ್ಯವಾಗಲಿದೆ. ಕೀಲುಗಳ ಮೇಲೆ ಪರಿಣಾಮ ಬೀರುವ ತೀವ್ರ ನೋವಿನಿಂದ ಕೂಡಿರುವ ಸಂಧಿವಾತ ಸಮಸ್ಯೆ ದೀರ್ಘಾವಧಿ ಬಾಧಿಸುವ ಕಾಯಿಲೆ. ಇದು ಕೀಲುನೋವು ಮತ್ತು ಬಿಗಿತಕ್ಕೆ ಕಾರಣವಾಗಿ, ರೋಗಿಯ ದೈನಂದಿನ ಚಟುವಟಿಕೆಗಳಿಗೆ ತೀವ್ರ ಅಡ್ಡಿ ಉಂಟುಮಾಡುತ್ತದೆ. ಈ ಕಾಯಿಲೆ ಕೆಲವರಲ್ಲಿ ಆನುವಂಶಿಕವಾಗಿಯೂ ಕಾಡುತ್ತದೆ. ಸಂಧಿವಾತದ ಆರಂಭಿಕ ಚಿಹ್ನೆ ಮತ್ತು ರೋಗಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮೂಲಕ ದುಷ್ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ.
ಸಾಮಾನ್ಯ ಕಾರಣ: ಮಂಡಿನೋವು ಸೇರಿ ಸಂಧಿವಾತಕ್ಕೆ ಕಾರಣಗಳು ಹಲವು. ಅನುವಂಶಿಕವಾಗಿದ್ದರೆ ಅತಿಕಡಿಮೆ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಮಧುಮೇಹಿಗಳು ಹಾಗೂ ಥೈರಾಯಿಡ್ ಸಮಸ್ಯೆ ಇರುವವರಲ್ಲೂ ಸಂಧಿವಾತ ಸಾಮಾನ್ಯ. ಇದಲ್ಲದೆ ಆಟೋ ಇಮ್ಯೂನ್ ರೋಗಗಳು ಮತ್ತು ಸೋಂಕುಗಳಿಂದ ಹಾಗೂ ಮೂಳೆ ಮುರಿತ, ಅತಿಯಾದ ಬೊಜ್ಜು ಸಹ ಸಂಧಿವಾತಕ್ಕೆ ಕಾರಣ. ಇದರ ಹೊರತಾಗಿ ವಯೋಸಹಜವಾಗಿಯೂ ಈ ಸಮಸ್ಯೆ ಬರುವ ಸಾಧ್ಯತೆಗಳು ಹೆಚ್ಚು. ಬೊಜ್ಜು, ವಿಟಮಿನ್ ‘ಡಿ’ ಕೊರತೆಯೂ ಕಾರಣವಾಗಲಿದೆ. ಧೂಮಪಾನಿಗಳಲ್ಲೂ ಸಮಸ್ಯೆ ಹೆಚ್ಚಾಗಲಿದೆ.
ಪರಿಣಾಮಕಾರಿ ಚಿಕಿತ್ಸೆ: ಮಂಡಿನೋವು, ಸಂಧಿವಾತ ಇವುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಮತ್ತೆ ಜೀವನೋತ್ಸಾಹ ಪಡೆಯಲು ಸಾಧ್ಯವಿದೆ. ಎಲ್ಲದಕ್ಕೂ ಶಸ್ತ್ರ ಚಿಕಿತ್ಸೆಯ ಅವಕಶ್ಯತೆ ಇರುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅತ್ಯವಶ್ಯಕ. ಇದರಲ್ಲಿ ನಿಖರತೆಯ ಶಸ್ತ್ರಚಿಕಿತ್ಸೆಗಾಗಿ ‘ರೋಬಾಟಿಕ್ ತಂತ್ರಜ್ಞಾನ’ ಆಯ್ಕೆ ಉತ್ತಮ. ವೆಚ್ಚದಲ್ಲಿ ಸಾಮಾನ್ಯ ಚಿಕಿತ್ಸೆಗಿಂತ ತುಸು ಹೆಚ್ಚಾದರೂ ನಿಖರತೆ, ಕಡಿಮೆ ನೋವು, ಬೇಗ ಗುಣಮುಖರಾಗಲು ಸಹಕಾರಿ. ಇದಲ್ಲದೆ ಚಿಕಿತ್ಸೆ ನಂತರ ಕಡಿಮೆ ಆಸ್ಪತ್ರೆ ವಾಸ ಇರಲಿದೆ. ಇದು ಕಡಿಮೆ ರಕ್ತಸ್ರಾವ ಹಾಗೂ ಕಡಿಮೆ ನೋವುನಿಂದ ಕೂಡಿರುತ್ತದೆ.

ರೋಬಾಟಿಕ್ ಭವಿಷ್ಯ!

ವೈದ್ಯಕೀಯ ಕ್ಷೇತ್ರವನ್ನೂ ತಂತ್ರಜ್ಞಾನ ಗಾಢವಾಗಿ ಆವರಿಸಿಕೊಂಡಿದೆ. ಇತ್ತೀಚೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಯು ಸಾಕಷ್ಟು ಅಭಿವೃದ್ಧಿಗೊಂಡಿದ್ದು, ಅತಿಸೂಕ್ಷ್ಮ ಶಸ್ತ್ರಕ್ರಿಯೆಗಳಿಗೆ ಅನುಕೂಲವಾಗುತ್ತಿದೆ. ರೋಬಾಟಿಕ್ ತಂತ್ರಜ್ಞಾನದ ಬಳಕೆಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಲಾಭವೇನು ಎಂದು ಕೇಳಿದರೆ, ಮುಖ್ಯವಾಗಿ ಶಸ್ತ್ರಚಿಕಿತ್ಸೆಯ ಗುಣಮಟ್ಟ ವರ್ಧಿಸಲಿದೆ. ಎ.ಐ. ಮತ್ತಿತರ ತಂತ್ರಜ್ಞಾನಗಳ ಬಳಕೆಯಿಂದ ಶಸ್ತ್ರಚಿಕಿತ್ಸೆ ವೇಳೆ ಮೂಳೆಗಳನ್ನು ತುಂಡರಿಸುವುದು, ಅಲೈನ್ ಮಾಡುವುದು ಇತ್ಯಾದಿ ಕೆಲಸಗಳನ್ನು ನಿಖರವಾದ ಅಳತೆ ಜತೆ ಸೂಕ್ಷ್ಮವಾಗಿ ನಡೆಸಲು ಸಾಧ್ಯವಾಗುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯ ಸತ್ಪರಿಣಾಮ 15- 20 ಇದ್ದರೆ, ರೋಬಾಟಿಕ್ ಬಳಕೆಯ ಮೂಲಕ ಇನ್​ಪ್ಲಾಂಟ್​ಗಳು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಸದ್ಯ ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆಯನ್ನು ರೋಬಾಟಿಕ್ ಮೂಲಕ ಮಾಡಲು ಸಾಧ್ಯವಿಲ್ಲ. ಆದರೆ ಎ.ಐ. ತಂತ್ರಜ್ಞಾನ ಬಳಕೆಯೊಂದಿಗೆ ಭವಿಷ್ಯದಲ್ಲಿ ಸಾಧ್ಯವಾಗಲೂ ಬಹುದು.

ನೋವುನಿವಾರಕ ಮಾತ್ರೆ ಆಪಾಯ

ಮಂಡಿ, ಮೊಣಕಾಲು, ಭುಜ ಸೇರಿ ಸಂಧಿವಾತವನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಬಹಳಷ್ಟು ಮಂದಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ತಾತ್ಕಾಲಿಕ ಶಮನವಾಗುತ್ತದೆ. ಆದರೆ ದೀರ್ಘಕಾಲದಲ್ಲಿ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ಆರೋಗ್ಯ ಸಮಸ್ಯೆಗೆ ಸ್ವಯಂಚಿಕಿತ್ಸೆ ಒಳಿತಲ್ಲ. ಅದರಲ್ಲೂ ಮಧುಮೇಹ, ಹೃದ್ರೋಗ ಸೇರಿ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಸೂಕ್ತವಲ್ಲ.

ಅನುಭವ ಮುಖ್ಯ

ಸದ್ಯ ರೋಬಾಟಿಕ್ ತಂತ್ರಜ್ಞಾನ ಬಳಕೆ ಇದ್ದರೂ ವೈದ್ಯರ ಮಾರ್ಗದರ್ಶನ ಮುಖ್ಯವಾಗಿದೆ. ತಂತ್ರಜ್ಞಾನವು, ನಾವು ಏನು ಮಾಹಿತಿ ನೀಡುತ್ತೇವೋ ಅದರ ಆಧಾರದಲ್ಲಿಯೇ ಮುನ್ನಡೆಯುತ್ತದೆಯೇ ಹೊರತು ಕೆಲವೊಂದು ಸಂದರ್ಭಗಳಲ್ಲಿ ನಾವೇ ಅದನ್ನು ತಡೆದು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರೋಬಾಟಿಕ್ ಬಳಕೆಯಲ್ಲಿ ವೈದ್ಯರ ಅನುಭವವೂ ಹೆಚ್ಚಿರಬೇಕು. ವೃತ್ತಿಯ ಆರಂಭದಲ್ಲೇ ಬಳಕೆ ಮಾಡುವುದು ಉಚಿತವಲ್ಲ. ಸದ್ಯ ಮಂಡಿನೋವು ಸೇರಿ ಸಂಧಿವಾತಕ್ಕೆ ಸಾಂಪ್ರದಾಯಕ ಹಾಗೂ ರೋಬಾಟಿಕ್ ಎಂದು ಎರಡು ವಿಧದಲ್ಲಿ ಚಿಕಿತ್ಸೆ ಲಭ್ಯವಿದ್ದು, ಚಿಕಿತ್ಸೆಯ ಆಯ್ಕೆಯನ್ನು ರೋಗಿಯ ಜತೆ ವಿಶ್ಲೇಶಿಸಿ ಮಾಡಲಾಗುತ್ತದೆ.

ಡಾ.ರವಿರಾಜ್ ಆಥೋಕೇರ್​ನಲ್ಲಿ ಸಮಗ್ರ ಆರೈಕೆ

ನಗರದ ಬನ್ನೇರುಘಟ್ಟ ರಸ್ತೆಯ ವಿಜಯ ಬ್ಯಾಂಕ್ ಲೇಔಟ್​ನಲ್ಲಿರುವ ವಿಜಯ ಮೆಡಿಕಲ್ ಸೆಂಟರ್ (ಡಾ. ರವಿರಾಜ್ ಆಥೋಕೇರ್) ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಇದು ಮೂಳೆ, ಕೀಲು ಹಾಗೂ ಗಾಯಗಳ ಚಿಕಿತ್ಸೆಯಲ್ಲಿ ವಿಶೇಷ ಸೇವೆ ನೀಡುತ್ತಿರುವ ಪ್ರಮುಖ ಅಸ್ಥಿ ಚಿಕಿತ್ಸಾ ಕೇಂದ್ರವಾಗಿದೆ. 26 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಹಿರಿಯ ಅಸ್ಥಿ ತಜ್ಞ ಡಾ.ಎ. ರವಿರಾಜ್ ನೇತೃತ್ವದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸೇವೆ ಮತ್ತು ಚಿಕಿತ್ಸೆ ಲಭ್ಯವಿದೆ. ಮೊಣಕಾಲು ಮತ್ತು ಸೊಂಟದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ, ಆಥ್ರೋಸ್ಕೋಪಿ, ಕ್ರೀಡಾ ಗಾಯಗಳ ಚಿಕಿತ್ಸೆ ಹಾಗೂ ಸಂಕೀರ್ಣ ಅಪಘಾತ ಗಾಯಗಳಿಗೆ ಪರಿಣಿತ ವೈದ್ಯಕೀಯ ಸೇವೆ ಕೇಂದ್ರದ ಪ್ರಮುಖ ವಿಶೇಷತೆಗಳಾಗಿವೆ. ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈಯಕ್ತಿಕ ಚಿಕಿತ್ಸಾ ಯೋಜನೆ ರೂಪಿಸಿ ಸಮಗ್ರ ಆರೈಕೆ ನೀಡಲಾಗುತ್ತದೆ. ಡಾ. ರವಿರಾಜ್ ಅವರು ಅಪೋಲೊ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಹಾಗೂ ವಿಶ್ವಾಸಾರ್ಹ ವೈದ್ಯಕೀಯ ಸೇವೆಯಿಂದ

ರೋಬಾಟಿಕ್ ಕಾರ್ಯನಿರ್ವಹಣೆ

ರೋಬಾಟಿಕ್ ಶಸ್ತ್ರಚಿಕಿತ್ಸೆಯನ್ನು ಕೇವಲ ಯಂತ್ರವೇ ಮಾಡುವುದಿಲ್ಲ. ಬದಲಿಗೆ ನುರಿತ ವೈದ್ಯರ ತಂಡ ರೋಬಾಟಿಕ್ ಯಂತ್ರದ ನಿರ್ವಹಣೆ ಮಾಡುವ ಮೂಲಕ ಈ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಈ ಚಿಕಿತ್ಸಾ ವಿಧಾನದ ಯೋಜನೆ ರೂಪಿಸುವುದು ವೈದ್ಯರೇ ಆಗಿರುತ್ತಾರೆ. ಯೋಜನೆ ನಿಖರವಾಗಿದ್ದರೆ, ಶಸ್ತ್ರಚಿಕಿತ್ಸೆ ಕೂಡ ಅಷ್ಟೇ ನಿಖರವಾಗಿರಲಿದೆ. ಚಿಕಿತ್ಸೆಗೆ ಒಳಪಡುವ ವ್ಯಕ್ತಿಯ ಮಂಡಿಯ ಕೀಲುಗಳು ಸರಿಯಾದ ಕ್ರಮದಲ್ಲಿ ಗುರುತು ಮಾಡಿಕೊಂಡರೆ, ಅದರ ಆಧಾರದ ಮೇಲೆ ರೋಬಾಟಿಕ್ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ರೋಗಿಗೆ ಸಿ.ಟಿ. ಸ್ಕಾ್ಯನ್ ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಂಡಿಯ ಕೀಲುಗಳನ್ನು ನಿರ್ದಿಷ್ಟ ಹಾಗೂ ನಿಖರವಾಗಿ ಗುರುತು ಮಾಡಲಾಗುತ್ತದೆ. ಇದನ್ನು ವರ್ಚುವಲ್ ‘3ಡಿ’ ಮೋಡ್ ಅಲ್ಲಿ ರೋಬಾಟಿಕ್ ಸ್ವೀಕರಿಸಲಿದೆ. ಇದಕ್ಕೆ ನುರಿತ ಮತ್ತು ತಜ್ಞ ವೈದ್ಯರ ಅವಶ್ಯಕತೆ ಇರುತ್ತದೆ. ಚಿಕಿತ್ಸೆ ವೇಳೆ ರೋಬಾಟ್ ಯಂತ್ರದ ನೆರವಿನಿಂದ ಗುರುತು ಮಾಡಿರುವ ನಿರ್ದಿಷ್ಟ ಜಾಗವನ್ನು ಕತ್ತರಿಸಲಿದೆ. ಇದರಲ್ಲಿ ವೈದ್ಯರೂ ಭಾಗಿಯಾಗುವುದರಿಂದ ಶಸ್ತ್ರಚಿಕಿತ್ಸೆಯಲ್ಲಿ ಗುರಿ ತಪ್ಪುವ ಸಾಧ್ಯತೆ ತೀರಾ ಕಡಿಮೆ. ಬದಲಿಗೆ ನಿಖರತೆಯಿಂದ ಚಿಕಿತ್ಸೆ ನಡೆಸಬಹುದಾಗಿದೆ.

ಮುಖ್ಯಾಂಶಗಳು

  • ಕೀಲು, ಮೂಳೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಮಂಡಿ ನೋವು (ಆಸ್ಟಿಯೋ ಆರ್ಥರೈಟಿಸ್) ತುಂಬಾ ಸಾಮಾನ್ಯವಾದದ್ದು.
  • ಪಾಲಕರಿಗೆ ಆಸ್ಟಿಯಾ ಆರ್ಥರೈಟಿಸ್ ಇಲ್ಲದಿದ್ದರೂ ಮಕ್ಕಳಿಗೆ ಬರುವ ಸಾಧ್ಯತೆ ಇದೆ.
  • ಆಹಾರ ಹಾಗೂ ಜೀವನಶೈಲಿಯಲ್ಲಿ ಕ್ರಮಗಳು ಉತ್ತಮವಾಗಿರಲಿ.
  • ವ್ಯಾಯಾಮ, ಔಷಧಗಳು ಹಾಗೂ ಜೀವನಶೈಲಿಯಲ್ಲಿ ಮಾರ್ಪಾಡು ಮಾಡುವುದು ಸಹಾಯವಾಗುತ್ತದೆ.
  • ಪ್ಲಾಸ್ಮಾ ಥೆರಪಿ (ಪಿಆರ್​ಪಿ) ಹಾಗೂ ಹ್ಯಾಲುರೋನೇಟ್ ಮಂಡಿ ಇಂಜೆಕ್ಷನ್​ಗಳು ನಿಯಮಿತ ಸಮಯಕ್ಕೆ ಸಹಾಯವಾಗುತ್ತವೆ.
  • ತುಂಬಾ ಅಡ್ವಾನ್​ಸ್ ಆರ್ಥರೈಟಿಸ್​ಗೆ ಕ್ನೀ ರಿಪ್ಲೆಸ್​ವೆುಂಟ್ ಶಸ್ತ್ರಚಿಕಿತ್ಸೆ ತುಂಬಾ ಫಲಕಾರಿಯಾಗಿರುತ್ತದೆ.
  • ನೂತನ ರೊಬಾಟಿಕ್ ತಂತ್ರಜ್ಞಾನ ಒಂದು ಗೇಮ್ ಚೇಂಜರ್.

ಪ್ಲಾಸ್ಮಾ ಥೆರಪಿ (ಪಿಆರ್​ಪಿ) ತಾತ್ಕಾಲಿಕ ಪರಿಹಾರ

ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿದರೆ ಚಿಕಿತ್ಸೆ ಸುಲಭವಾಗಲಿದ್ದು, ಹಾನಿ ಕಡಿಮೆ ಮಾಡಬಹುದು. ಸಾಮಾನ್ಯ ಸಮಸ್ಯೆಗೆ ಔಷಧ, ವ್ಯಾಯಾಮ, ಕ್ಯಾಲ್ಶಿಯಂ, ನೋವು ನಿವಾರಕ ಮಾತ್ರೆ, ಫಿಜಿಯೋಥೆರಪಿ ಮತ್ತು ಇಂಜೆಕ್ಷನ್​ಗಳನ್ನು ನೀಡಲಾಗುತ್ತದೆ. ಇದರಿಂದ ಸಮಸ್ಯೆಯ ಗಂಭೀರತೆಯನ್ನು ಕೆಲ ಸಮಯ ಮುಂದೂಡಬಹುದಾಗಿದೆ. ಆದರೆ ಶಸ್ತ್ರಚಿಕಿತ್ಸೆ ಅಂತಿಮ ಪರಿಹಾರ. ಸಮಸ್ಯೆ ಕಡಿಮೆ ಇದ್ದಾಗ ಶಸ್ತ್ರಚಿಕಿತ್ಸೆ ಇಲ್ಲದೆಯೇ ಸಂಧಿವಾತ ಕಾರ್ಟಿಲೆಜ್ ಬಲಪಡಿಸ ಬಹುದಾದ ಪೌಷ್ಟಿಕಾಂಶಭರಿತ ಒಳಕೀಲಿನ ಚುಚ್ಚುಮದ್ದು ಸ್ಟೆರಾಯ್್ಡಳು, ಸೋಡಿಯಂ ಹ್ಯಾಲುರೋನೇಟ್, ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (ಪಿಆರ್​ಪಿ) ನೀಡಿ ನೋವು ನಿಯಂತ್ರಿಸಬಹುದಾಗಿದೆ.

ವ್ಯಾಯಾಮಗಳು ಏನೇನು?

ಪ್ರಾರಂಭದ ಹಂತದಲ್ಲಿ ಲಘು ವ್ಯಾಯಾಮಗಳನ್ನು ಮಾಡುವುದು ತುಂಬ ಉತ್ತಮ. ಒಂದೊಮ್ಮೆ ಜಿಮ್ ಹಾಗೂ ಯೋಗಾಸನ ಎರಡಕ್ಕೂ ಶ್ರಮ ಹಾಕುವುದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮಾಂಸಗಳಿಗೆ ಪುಷ್ಟಿ ಕೊಡುವ ವ್ಯಾಯಾಮಗಳನ್ನು ಮಾಡುತ್ತಲೇ ವ್ಯಾಯಾಮವನ್ನು ಹೆಚ್ಚಿಸಬೇಕು. ನೋವು ಇರುವ ಸಂದರ್ಭದಲ್ಲಿ ಅದನ್ನು ಶಮನ ಮಾಡಬೇಕೆಂದು ಗ್ರಹಿಸಿ ವ್ಯಾಯಾಮ ಮಾಡಲೇಬಾರದು. ಸರಿಯಾದ ಡಯಟ್ ಹಾಗೂ ವ್ಯಾಯಾಮದ ಮೂಲಕ ಮೂಳೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಫಿಜಿಯೋಥರಪಿ ಮುಗಿದ ಬಳಿಕ ಕ್ರಮೇಣ ವ್ಯಾಯಾಮಕ್ಕೆ ಇಳಿಯಬಹುದು.