ಬೆಂಗಳೂರು: ತಮಗೆ ಪರಿಚಯವಿಲ್ಲದ, ಆದರೆ ಅಗತ್ಯವಿರುವ ರೋಗಿಗೆ ಕಿಡ್ನಿ ದಾನ ಮಾಡುವುದಾಗಿ ವೈದ್ಯೆಯೊಬ್ಬರು ಮುಂದೆ ಬಂದಿದ್ದು, ಅದಕ್ಕೆ ಹೈಕೋರ್ಟ್ನ ಅನುಮತಿ ಪಡೆದುಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಅನುವಂಶಿಕ ಮಧುಮೇಹ ಇರುವ ಕಾರಣ ಅದು ತಮ್ಮ ಕಿಡ್ನಿ ಮೇಲೆ ದುಷ್ಪರಿಣಾಮ ಬೀರಿದರೆ ಭವಿಷ್ಯದಲ್ಲಿ ದಾನ ಮಾಡಲು ಸಾದ್ಯವಿಲ್ಲ. ಆದ್ದರಿಂದ ತಾನು ಈಗಲೇ ಈ ಕ್ರಮಕ್ಕೆ ಮುಂದಾಗಿರುವುದಾಗಿ ವೈದ್ಯೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಾನು ಕಿಡ್ನಿ ದಾನಕ್ಕೆ ಮುಂದಾಗಿದ್ದು, ಅದನ್ನು ಅಗತ್ಯವಿರುವ ರೋಗಿಗೆ ನೀಡಬೇಕು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮಾನವ ಅಂಗ ಮತ್ತು ಅಂಗಾಂಶ ವರ್ಗಾವಣೆ ಸಮಿತಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅದನ್ನು ಸಮಿತಿ ಪರಿಗಣಿಸಿಲ್ಲ. ಆದ್ದರಿಂದ ಸೂಕ್ತ ನಿರ್ದೇಶನ ನೀಡಬೇಕು ಎಂದು 58 ವರ್ಷ ವಯಸ್ಸಿನ ವೈದ್ಯೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವೈದ್ಯೆಯ ಕಿಡ್ನಿ ದಾನದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮಣಿಪಾಲ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ. ರೋಗಿ ಮತ್ತು ವೈದ್ಯೆಯ ನಡುವೆ ಹಣಕಾಸಿನ ವ್ಯವಹಾರ ನಡೆದಿರಬಹುದು ಎಂಬ ಅನುಮಾನದ ಕಾರಣ ಆಸ್ಪತ್ರೆಯ ಸಮಿತಿಯು ವೈದ್ಯೆಯ ಮನವಿಯನ್ನು ಪರಿಗಣಿಸದೆ ಇದ್ದಿರಬಹುದು ಎಂದು ವಿಚಾರಣೆ ವೇಳೆ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಆದರೆ, ತಾನು ಕಿಡ್ನಿ ದಾನಕ್ಕೆ ಯಾವುದೇ ಪ್ರತಿಲ ಬಯಸುವುದಿಲ್ಲ ಮತ್ತು ಯಾರು ದಾನ ಸ್ವೀಕರಿಸುತ್ತಾರೆ ಎಂಬ ಬಗ್ಗೆಯೂ ಮಾಹಿತಿ ಬೇಡ. ಯಾರಿಗೆ ಕಿಡ್ನಿಯ ಅಗತ್ಯವಿದೆಯೋ ಅವರನ್ನು ಆಸ್ಪತ್ರೆಯೇ ಗುರುತಿಸಲಿ ಎಂದು ನ್ಯಾಯಾಲಯಕ್ಕೆ ವೈದ್ಯೆ ತಿಳಿಸಿದರು.
ಪರೋಪಕಾರಿ ಚಿಂತನೆ:
ಮಹಿಳೆಯ ವಾದಾಂಶಗಳನ್ನು ಆಲಿಸಿದ ನ್ಯಾಯಪೀಠ, ಪರೋಪಕಾರಿ ಚಿಂತನೆಯಿಂದ ಕಿಡ್ನಿ ದಾನ ಮಾಡಲು ಮುಂದಾಗಿರುವುದು ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿದಾರರು ಸ್ವತಃ ವೈದ್ಯರಾಗಿದ್ದು, ಕಿಡ್ನಿ ದಾನದಿಂದ ಆಗಬಹುದಾದ ಎಲ್ಲ ಪರಿಣಾಮಗಳನ್ನು ತಿಳಿದಿದ್ದಾರೆ. ಆದ್ದರಿಂದ ವೈದ್ಯೆಯ ಮನವಿಯನ್ನು ಪರಿಗಣಿಸಿ ಕಿಡ್ನಿ ಅಗತ್ಯವಿರುವ ರೋಗಿಗಳನ್ನು ಗುರುತಿಸಬೇಕು. ಅವರಲ್ಲಿ ವೈದ್ಯೆಯ ಕಿಡ್ನಿ ಯಾರಿಗೆ ಹೊಂದಿಕೆಯಾಗುತ್ತದೆ ಎಂದು ಪರಿಶೀಲಿಸಿ ಮುಂದಿನ ಕ್ರಮವನ್ನು ಕಾನೂನು ಪ್ರಕಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ, ಮಣಿಪಾಲ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ.
ವೈದ್ಯಕಿಯ ವರದಿ ಆಧರಿಸಿ ನಿರ್ಧಾರ
ದಾನಿಯ ಕಿಡ್ನಿಗೆ ಹೊಂದಿಕೆ ಆಗಬಹುದಾದ ಐವರು ವ್ಯಕ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ. ದಾನ ಸ್ವೀಕರಿಸುವವರಲ್ಲಿ ಕಿಡ್ನಿಯ ಹೊಂದಾಣಿಕೆ ಬಗ್ಗೆ ತಿಳಿಯಲು ಹಲವು ವೈದ್ಯಕಿಯ ಪರೀಕ್ಷೆಗಳನ್ನು ಮಾಡಬೇಕಿದೆ. ಅದಕ್ಕೆ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕು. ವೈದ್ಯಕಿಯ ವರದಿ ಆಧರಿಸಿ ಕಿಡ್ನಿ ಸ್ವೀಕೃತಿಗೆ ರೋಗಿಯನ್ನು ಆಯ್ಕೆ ಮಾಡಲಾಗುವುದು ಎಂದು ಆಸ್ಪತ್ರೆಯು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.