Do you need to hold a meeting even for a small task? 
ರಾಜ್ಯ

ಸಣ್ಣ ಕೆಲಸಕ್ಕೂ ಸಭೆ ನಡೆಸಬೇಕೆ?

ಗುಬ್ಬಿ: ತಾಲೂಕಿನಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಜಲ ಜೀವನ್​ ಮಿಷನ್​ ಯೋಜನೆಯಡಿ ನಡೆದ ಕಾಮಗಾರಿಗಳಿಂದ ಕಂಡು ಬರುತ್ತಿದೆ. ಎಲ್ಲೂ ಪೂರ್ಣವಾಗಿ ಕೆಲಸ ಮಾಡಿಲ್ಲ. ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತ ಬಗ್ಗೆ ದೂರುಗಳು ಹೆಚ್ಚಾಗಿವೆ. ಜತೆಗೆ ಬೆಸ್ಕಾಂ ಇಲಾಖೆಯ ವಿಳಂಬ ನೀತಿ ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕ ಎಸ್​.ಆರ್​. ಶ್ರೀನಿವಾಸ್​ ಬೇಸರ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟಾಸ್ಕ್​ಫೋರ್ಸ್​ ಸಭೆಯಲ್ಲಿ ಮಾತನಾಡಿ, ನೀರಿಗೆ ಸಂಬಂಧಪಟ್ಟ ಇಲಾಖೆಗಳು ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಸಣ್ಣಪುಟ್ಟ ದೂರುಗಳು ಸ್ಥಳಿಯ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಹೇಳುತ್ತಾರೆ. ಅದಕ್ಕೂ ಸಭೆ ನಡೆಸಿಯೇ ಸರಿಪಡಿಸುವ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಟಿಸಿ ಚಾರ್ಜ್​ ಮಾಡಿಲ್ಲ, ಪೈಪ್​ಲೈನ್​ ಅರ್ಧಕ್ಕೆ ನಿಂತಿದೆ, ಪಂಪ್​ ಅಳವಡಿಸಿಲ್ಲ ಹೀಗೆ ಇಲಾಖೆ ಹಂತದಲ್ಲಿ ಆಗುವ ಕೆಲಸವನ್ನು ತುರ್ತು ಸಭೆಯಲ್ಲಿ ಚರ್ಚಿಸುವ ವಾತಾವರಣ ನೋಡಿದರೆ, ಅಧಿಕಾರಿ ವರ್ಗ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟ್ಯಾಂತರ ರೂಪಾಯಿ ವೆಚ್ಚದ ಹೋಬಳಿ ಕೇಂದ್ರದ ಜೆಜೆಎಂ ಕಾಮಗಾರಿಗಳು ಹಸ್ತಾಂತರ ಆಗದೇ ತನಿಖೆಗೆ ಒಳಪಟ್ಟಿವೆ ಎಂಬುದು ಬೇಸರ ಮೂಡಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಆರಂಭದಲ್ಲೇ ದುರಸ್ತಿಗೆ ಬಂದಿವೆ. 2.5 ಕೋಟಿ ರೂ. ರಿಪೇರಿಗೆ ಹಣ ಕೇಳಿರುವುದು ಅಚ್ಚರಿ ತಂದಿದೆ. ಸರ್ಕಾರಿ ಜಾಗ ವಶಕ್ಕೆ ಪಡೆದು ನೀರಿನ ಟ್ಯಾಂಕ್​ ನಿರ್ಮಿಸಲು ಅನುವು ಮಾಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಕೊಳವೆಬಾವಿ ಅವಶ್ಯವಿದ್ದಲ್ಲಿ ಕೊರೆಯಲಾಗುವುದು. ವಿದ್ಯುತ್​ ಸಂಪರ್ಕ ಎಲ್ಲಿಯೂ ವಿಳಂಬವಾಗದಂತೆ ಬೆಸ್ಕಾಂ ಅಧಿಕಾರಿಗಳು ನಿಗಾವಹಿಸಬೇಕು. ಸಮಸ್ಯೆ ಕಂಡಲ್ಲಿ ತಕ್ಷಣ ಬಗೆಹರಿಸಬೇಕು ಎಂದು ತಿಳಿಸಿದರು.
ಅರಣ್ಯ ಪ್ರದೇಶದ ಜಾಗವೆಂದು ಕೆಲವು ಸರ್ಕಾರಿ ಯೋಜನೆಗೆ ಅಡ್ಡಿಯಾಗಿದೆ. ಸರ್ವೇ ನಡೆಸಿ ಅರಣ್ಯ ಅಲ್ಲದ್ದನ್ನು ಬಿಟ್ಟುಕೊಡಬೇಕು. ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ತಾಲೂಕಿನಲ್ಲಿ 38 ಶಾಲೆಯಲ್ಲಿ ಕಾಮಗಾರಿ ನಡೆಯಲಿದೆ. ಮಣ್ಣಮ್ಮ ದೇವಸ್ಥಾನದ ಸಮೀಪದಲ್ಲಿ ನಿವೇಶನ ಎಂದು ಹೇಳಿಕೊಂಡೇ ಅರ್ಧ ಎಕರೆ ಒತ್ತುವರಿ ಮಾಡಿರುತ್ತಾರೆ. ಎಲ್ಲವನ್ನೂ ತರೆವು ಮಾಡಿ ಅರ್ಹರಿಗೆ ಸೈಟ್​ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದರು.