ಐಐಐಟಿ-ಬೆಂಗಳೂರಿನ 26ನೇ ಘಟಿಕೋತ್ಸವದಲ್ಲಿ ಭಾನುವಾರ ಪದವಿ ಪ್ರದಾನ ಮಾಡಲಾಯಿತು. 
ರಾಜ್ಯ

ಎಐ ಜಗತ್ತಿನಲ್ಲಿ ಯಶಸ್ಸಿನ ಗುಟ್ಟು ಏನು ಗೊತ್ತಾ? ಐಐಟಿ ನಿರ್ದೇಶಕರು ಹೇಳಿದ ಕಿವಿಮಾತು ಇದೇ

ಪ್ರಮುಖ ಮುಖ್ಯಾಂಶಗಳು

  • ಐಐಐಟಿ-ಬೆಂಗಳೂರಿನ 26ನೇ ಘಟಿಕೋತ್ಸವ ಘಟಿಕೋತ್ಸವ ಭಾಷಣ, ನಿರಂತರವಾಗಿ ಜ್ಞಾನವನ್ನು ಅನ್ವೇಷಣೆ ಮಾಡುವುದರಿಂದ ಪರಿವರ್ತನೆ ಸಾಧ್ಯ
  • ಪ್ರತಿ ದಿನ ಒಂದಿಷ್ಟು ಸಮಯವನ್ನು ಬೌದ್ಧಿಕ ಕಲಿಕೆಗೆ ನೀಡಿದರೆ, ಅದು ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಲಿದೆ
  • ಯಾವುದೇ ಐಐಟಿ ಪಡೆಯದ ಆರ್ ಆೃಂಡ್ ಡಿ ಅನುದಾನವನ್ನು ಐಐಐಟಿ-ಬಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಬೆಂಗಳೂರು ಕೃತಕ ಬುದ್ಧಿಮತ್ತೆಯು (ಎಐ) ಪ್ರತಿ ದಿನ ಜಗತ್ತನ್ನು ಬದಲಾಯಿಸುತ್ತಿದೆ. ಕೆಲವು ವರ್ಷಗಳ ಬದಲಾವಣೆಯನ್ನು ಏಕಾಏಕಿ ಹಿಂದಿಕ್ಕಿದೆ. ಈ ನಿಟ್ಟನಲ್ಲಿ ತಾಂತ್ರಿಕ ಕ್ಷೇತ್ರದ ವೃತ್ತಿಪರರು ಪ್ರತಿ ದಿನ ಕಲಿಕೆ, ಹೊಸತನ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಐಐಟಿ ಗಾಂಧಿನಗರ ನಿರ್ದೇಶಕ ಡಾ. ರಜತ್ ಮೂನಾ ಸಲಹೆ ನೀಡಿದರು.
ಐಐಐಟಿ-ಬೆಂಗಳೂರಿನ 26ನೇ ಘಟಿಕೋತ್ಸವದಲ್ಲಿ ಭಾನುವಾರ ಘಟಿಕೋತ್ಸವ ಭಾಷಣ ಮಾಡಿದ ಅವರು, ಇಂದಿನ ಜ್ಞಾನವು ನಾಳೆಗೆ ಹಳೆಯದಾಗಬಹುದು. ಆದ್ದರಿಂದ ನಿರಂತರವಾಗಿ ಜ್ಞಾನವನ್ನು ಅನ್ವೇಷಣೆ ಮಾಡುವುದರಿಂದ ಪರಿವರ್ತನೆ ಸಾಧ್ಯವಾಗಲಿದೆ ಎಂದರು.
ಭಾರತವು ಇಂದು ವೃತ್ತಿಪರರರಿಗೆ ಅಪ್ರತಿಮ ಅವಕಾಶಗಳನ್ನು ಸೃಷ್ಟಿಸಿದೆ. ಎಐ, ಸೆಮಿಕಂಡಕ್ಟರ್, ಕ್ವಾಂಟಮ್ ಕಂಪ್ಯೂಟಿಂಗ್, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯರು ಯಶಸ್ಸು ಸಾಧಿಸುತ್ತಿದ್ದಾರೆ ಎಂಬುದು ಖುಷಿಯ ವಿಚಾರವಾಗಿದೆ ಎಂದರು.
ಪ್ರತಿ ದಿನ ಒಂದಿಷ್ಟು ಸಮಯವನ್ನು ಬೌದ್ಧಿಕ ಕಲಿಕೆಗೆ ನೀಡಿದರೆ, ಅದು ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಲಿದೆ ಎಂದ ಅವರು, ಯಶಸ್ಸಿನ ದೃಷ್ಟಿಯಿಂದ ಕಠಿಣ ಶ್ರಮ ಹಾಕಬೇಡಿ, ಯಾವುದೇ ಪ್ರತಿಲ ಬಯಸದೆ ಕೆಲಸವನ್ನು ಮಾಡಿದಾಗ ಯಶಸ್ಸು ಸಿಗಲಿದೆ. ಉದ್ಯಮ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ವಿನಮ್ರತೆ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಐಐಐಟಿ-ಬಿ ನಿರ್ದೇಶಕ ಡಾ. ದೇಬಬ್ರತ ದಾಸ್ ಮಾತನಾಡಿ, 2026 ರ ಪದವಿ ತರಗತಿಯು ಶೈಕ್ಷಣಿಕ, ಸಂಶೋಧನೆ, ಉದ್ಯಮಶೀಲತೆ, ಕ್ರೀಡೆ ಮತ್ತು ಕಲೆಗಳಲ್ಲಿ ಅಸಾಧಾರಣ ಪ್ರತಿಭೆ, ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯ ಮನೋಭಾವವನ್ನು ಪ್ರದರ್ಶಿಸಿದೆ. ನಮ್ಮ ವಿದ್ಯಾರ್ಥಿಗಳು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಶ್ರೇಷ್ಠತೆಯನ್ನು ಗಳಿಸಿದ್ದಾರೆ ಎಂದು ಶ್ಲಾಸಿದರು.
ಕಾರ್ಯಕ್ರಮದಲ್ಲಿ ಟೆಸ್ಸಾಲ್ವ್ ಸೆಮಿಕಂಡಕ್ಟರ್ ಅಧ್ಯಕ್ಷ ಡಾ. ವಿ. ವೀರಪ್ಪನ್, ಐಐಐಟಿ-ಬಿ ಅಧ್ಯಕ್ಷ ಬಿ.ವಿ. ನಾಯ್ಡು (ಪ್ರಭಾರಿ) ಉಪಸ್ಥಿತರಿದ್ದರು.

316 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

14 ಪಿಎಚ್.ಡಿ, 32 ಎಂಎಸ್‌ಸಿ ಸಂಶೋಧನೆ, 175 ಎಂ.ಟೆಕ್, 95 ಇಂಟಿಗ್ರೇಟೆಡ್ ಎಂ.ಟೆಕ್ ಸೇರಿ ಒಟ್ಟು 316 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಿಮ್ಹಾನ್ಸ್‌ನಲ್ಲಿ ನರಶಸ ಚಿಕಿತ್ಸಕರಾಗಿರುವ ಡಾ. ವಿಕಾಸ್‌ಗೆ ಕಂಪ್ಯೂಟರ್ ಸೈನ್ಸ್ ಆೃಂಡ್ ಇಂಜಿನಿಯರಿಂಗ್‌ನಲ್ಲಿನ ಸಂಶೋಧನೆಗಾಗಿ ಸಂಸ್ಥೆಯ 100ನೇ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಲಾಯಿತು.

ಗರಿಷ್ಠ 1.5 ಕೋಟಿ ರೂ. ಪ್ಯಾಕೇಜ್

ಈ ವರ್ಷ ಇಂಟಿಗ್ರೇಟೆಡ್ ಎಂ.ಟೆಕ್ ಕೋರ್ಸ್‌ನ ವಿದ್ಯಾರ್ಥಿಯೊಬ್ಬನಿಗೆ ದಾಖಲೆಯ 1.5 ಕೋಟಿ ರೂ. ದಾಖಲೆಯ ಪ್ಯಾಕೇಜ್ ದೊರೆತಿದೆ. ಇಬ್ಬರಿಗೆ 1.3 ಕೋಟಿ ರೂ., 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 60 ಲಕ್ಷ ರೂ., ಪ್ಯಾಕೇಜ್ 27 ವಿದ್ಯಾರ್ಥಿಗಳಿಗೆ 40-60 ಲಕ್ಷ ರೂ, ಮತ್ತು 110ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 20 ಲಕ್ಷ ರೂ.ಗಳ ಪ್ಯಾಕೇಜ್ ದೊರೆತಿದೆ ಎಂದು ಇದೇ ವೇಳೆ ಸಂಸ್ಥೆಯು ಮಾಹಿತಿ ನೀಡಿತು.
"

ಜಗತ್ತಿನಲ್ಲಿಯೇ ಮೂರನೇ ಅತಿದೊಡ್ಡ ನವೋದ್ಯಮ ವಾತಾವರಣವಿದೆ. 53ರಿಂದ 55 ಯೂನಿಕಾರ್ನ್‌ಗಳಿವೆ. ಮುಂದಿನ 20 ವರ್ಷಗಳಲ್ಲಿ ಭಾರತವುದ ಅತಿ ದೊಡ್ಡ ವೇದಿಕೆಯನ್ನು ನಿರ್ಮಿಸಲಿದೆ. ಯಾವುದೇ ಐಐಟಿ ಪಡೆಯದ ಆರ್ ಆೃಂಡ್ ಡಿ ಅನುದಾನವನ್ನು ಐಐಐಟಿ-ಬಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

— - ಬಿ.ವಿ. ನಾಯ್ಡು, ಐಐಐಟಿ-ಬಿ ಅಧ್ಯಕ್ಷ (ಪ್ರಭಾರ)