ಅರಕಲಗೂಡು ತಾಲೂಕಿನ ಕೇರಳಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಎ.ಮಂಜು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಸಂತೋಷ್‌ಗೌಡ, ಮಂಜುನಾಥ್, ನಾಗರಾಜು, ಬಸವರಾಜು ಇತರರಿದ್ದರು.
- ಕೇರಳಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
- ಶಾಸಕ ಎ.ಮಂಜು
ಅರಕಲಗೂಡು: ಕೇರಳಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ತಾಲೂಕಿನ ಕೇರಳಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿಗೆ ಬಸ್ ನಿಲ್ದಾಣವನ್ನು ಮಂಜೂರು ಮಾಡಿಸುವುದರ ಜತೆಗೆ ಅಡೆತಡೆಗಳನ್ನೆಲ್ಲ ನಿವಾರಿಸಲಾಗಿದೆ. ನಿಲ್ದಾಣ ಆವರಣದಲ್ಲಿ ಕಾಂಕ್ರೀಟ್ ಹಾಕುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಿದ್ದು ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಇದೀಗ 75 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಕಟ್ಟಲಾಗುವುದು. ಕಾಂಪೌಂಡ್ ಕಟ್ಟುವ ಮುನ್ನ ಸರ್ವೇ ನಡೆಸಿ ಸರಹದ್ದು ಗುರುತಿಸಬೇಕು ಎಂದರು.
ಕೇರಳಾಪುರದಿಂದ ಬೂದನೂರು ಮಾರ್ಗದ ರಸ್ತೆಯ ಆಯ್ದ ಭಾಗಕ್ಕೆ 2 ಕೋಟಿ ರೂ ವೆಚ್ಚದಲ್ಲಿ ಡಾಂಬರು ಹಾಕಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಲ್ಲ ಕಡೆ ರಸ್ತೆ ನಿರ್ಮಾಣ ಮಾಡುವ ಮುನ್ನ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಮಳೆ ನೀರಿಗೆ ರಸ್ತೆ ಹಾಳಾಗದಂತೆ ಜಾಗೃತಿ ವಹಿಸಿ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ, ಮುಖಂಡರಾದ ಸಂತೋಷ್‌ಗೌಡ, ಮಂಜುನಾಥ, ಬಸವರಾಜು, ನಾಗರಾಜು, ಹನುಮೇಗೌಡ ಇತರರಿದ್ದರು.