ಸುದ್ದಿಗೋಷ್ಠಿಯಲ್ಲಿ ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿ ನಿರ್ದೇಶಕ ನಂಜುಂಡ ಮೈಮ್ ಮಾತನಾಡಿದರು.
- ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿಯ ನಿರ್ದೇಶಕ ನಂಜುಂಡ ಮೈಮ್
- ವೃತ್ತಗಳಲ್ಲಿ ಪುತ್ಥಳಿ (ಪ್ರತಿಮೆ) ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬಾರದು
ಚನ್ನರಾಯಪಟ್ಟಣ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪಟ್ಟಣದ ವೃತ್ತಗಳಲ್ಲಿ ಪುತ್ಥಳಿ (ಪ್ರತಿಮೆ) ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬಾರದು ಎಂದು ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿಯ ನಿರ್ದೇಶಕ ನಂಜುಂಡ ಮೈಮ್ ಮನವಿ ಮಾಡಿದರು.
ಇತ್ತೀಚೆಗೆ ಪಟ್ಟಣದ ಪ್ರಮುಖ ಸರ್ಕಲ್ಗಳಲ್ಲಿ ಜನಪ್ರಿಯ ನಾಯಕರ ಪ್ರತಿಮೆ, ಪುತ್ಥಳಿ ನಿರ್ಮಾಣ ಮಾಡುವ ಅಭಿಮಾನಿಗಳ ಸಮೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಟ್ಟಣದ ಕೆ.ಆರ್.ವೃತ್ತದಲ್ಲಿ ಕೃಷ್ಣರಾಜೇಂದ್ರ, ಆಸ್ಪತ್ರೆ ವೃತ್ತದಲ್ಲಿ ಶ್ರೀಕಂಠಯ್ಯ ಹಾಗೂ ಕುವೆಂಪು ಪ್ರತಿಮೆ ನಿರ್ಮಾಣಕ್ಕೆ ಸಾಹಿತ್ಯಾಸಕ್ತರು ಮುಂದಾಗಿದ್ದಾರೆ. ಹಾಗಾಗಿ ಅವಕಾಶ ಬೇಡ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗದ್ದೆ ಹಳ್ಳದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ವೃತ್ತದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ಥಳಿ ನಿರ್ಮಾಣಕ್ಕೂ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಪಟ್ಟಣದ ಗುರುಭವನ ಬಳಿಯ ಕೆಂಪೇಗೌಡರ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಜು.5ರಂದು ನವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪುತ್ಥಳಿ ನಿರ್ಮಾಣಕ್ಕೂ ಅಭಿಮಾನಿಗಳು ತಯಾರಿಯಲ್ಲಿದ್ದಾರೆ. ಪಟ್ಟಣದ ಎಲ್ಲ ಪ್ರಮುಖ ವೃತ್ತಗಳಲ್ಲೂ ಪುತ್ಥಳಿ ಸ್ಥಾಪಿಸುವುದರಿಂದ ಸಮಾಜ ವಿರೋಧಿ ಶಕ್ತಿಗಳು ಒಡಕು ಮೂಡಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಜತೆಗೆ ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗಲಿದೆ ಎಂದು ಹೇಳಿದರು.
ಕೋಮು ಸೌಹಾರ್ದಕ್ಕೆ ಧಕ್ಕೆ ಬರುವ ಅಥವಾ ಗುಂಪು ಘರ್ಷಣೆಗಳು ನಡೆಯುವ ಸಾಧ್ಯತೆಯಿದ್ದು ಪ್ರತಿಮೆಗಳನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದ ಅವರು, ಪ್ರತಿಮೆಗಳನ್ನು ಸ್ಥಾಪಿಸುವುದಾದರೆ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಲಿ. ಅಲ್ಲಿ ಪೊಲೀಸ್ ಸುರಕ್ಷತೆ, ಸಿಸಿಟಿವಿ ಕಣ್ಗಾವಲು ಇರಲಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತಾಲೂಕು ಆಡಳಿತ ಪ್ರತಿಮೆಗಳ ನಿರ್ಮಾಣಕ್ಕೆ ಅವಕಾಶ ನೀಡಿದೆ. ತಾಲೂಕು ಕಚೇರಿ ಆವರಣದಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ಪರಮ ಗಂಗಾಧರ್, ಮಣಿಕಂಠ, ಪ್ರಶಾಂತ್, ಸಿ.ಜಿ.ಕುಮಾರ್, ಗನ್ನಿ, ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿದ್ದರು