- *ಒಕ್ಕಲಿಗ ನಾಯಕತ್ವದ ಪೈಪೋಟಿ
- *ಪಕ್ಷದ ಅಸ್ತಿತ್ವ ಮತ್ತು ಕಾರ್ಯಕರ್ತರ ವಲಸೆ ಭೀತಿ
- *ಎಚ್ಡಿಡಿ ಮೇಲೆ ಹೆಚ್ಚಿದ ಒತ್ತಡ
ಶಿವಾನಂದ ತಗಡೂರು, ಬೆಂಗಳೂರು:
ಒಕ್ಕಲಿಗರ ಪಾಳೇಯದಲ್ಲಿ ತನ್ನದೇ ಪಾರುಪತ್ಯವನ್ನು ಸ್ಥಾಪಿಸಿಕೊಂಡಿದ್ದ ಜೆಡಿಎಸ್ ಇನ್ನು ಹೆಚ್ಚು ಸವಾಲಿನ ದಿನಗಳು ಎದುರಾಗುತ್ತಿವೆ. ಈ ಸವಾಲುಗಳ ವಿರುದ್ದ ಈಜಲು ಈಗಿನಿಂದಲೇ ತಂತ್ರಗಾರಿಕೆ ರೂಪಿಸುತ್ತಿರುವ ದಳಪತಿಗಳು ರಕ್ಷಣಾತ್ಮಕವಾಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುತ್ತಿರುವ ಈ ಸಂದರ್ಭ, ಹಳೇ ಮೈಸೂರು ಭಾಗದ ರಾಜಕಾರಣದಲ್ಲಿ ಮತ್ತು ಪ್ರಮುಖವಾಗಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ರಾಜಕೀಯ ತಲ್ಲಣ ಹಾಗೂ ಸವಾಲುಗಳನ್ನು ತಂದಿಟ್ಟಿದೆ.
ಒಕ್ಕಲಿಗ ಸಮುದಾಯದ ಪ್ರಬಲ ಕೋಟೆಯಾಗಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಸಾಂಪ್ರದಾಯಿಕವಾಗಿ ಬಲ ಹೊಂದಿದ್ದು, ದೇವೇಗೌಡರ ಕುಟುಂಬವೇ ಇಲ್ಲಿನ ರಾಜಕಾರಣದ ಕೇಂದ್ರಬಿಂದುವಾಗಿತ್ತು. ಆದರೆ ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದರಿಂದ ಜೆಡಿಎಸ್ ಎದುರಿಸಲಿರುವ ಪ್ರಮುಖ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆಯೇ ರಾಜಕೀಯ ಪಡಸಾಲೆಯಲ್ಲಿ ಥರಾವರಿ ಚರ್ಚೆ ನಡೆಯುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಮುದಾಯದ ಸರ್ವೋಚ್ಚ ನಾಯಕರೆಂದು ಬಿಂಬಿಸಲಾಗುತ್ತಿತ್ತು. ಆದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೇರುತ್ತಿರುವುದರಿಂದ, ಒಕ್ಕಲಿಗ ಸಮುದಾಯಕ್ಕೆ ನೇರವಾಗಿ ಕಾಂಗ್ರೆಸ್‌ನಿಂದಲೇ ಒಬ್ಬ ಪ್ರಭಾವಿ ಮುಖ್ಯಮಂತ್ರಿ ನಾಯಕ ಸಿಕ್ಕಂತಾಗುತ್ತದೆ. ಇದರ ಪರಿಣಾಮವಾಗಿ ಸಮುದಾಯದ ಯುವಕರು ಮತ್ತು ತಟಸ್ಥ ಮತದಾರರು ಪ್ರಾದೇಶಿಕ ಪಕ್ಷಕ್ಕಿಂತ ನೇರವಾಗಿ ಅಧಿಕಾರದಲ್ಲಿರುವ ಡಿ.ಕೆ. ಶಿವಕುಮಾರ್ ಕಡೆಗೆ ಆಕರ್ಷಿತರಾಗುವ ದೊಡ್ಡ ಆತಂಕವೂ ಜೆಡಿಎಸ್‌ಗೆ ಕಾಡುತ್ತಿದೆ.
*ಪಕ್ಷದ ಅಸ್ತಿತ್ವ ಮತ್ತು ಕಾರ್ಯಕರ್ತರ ವಲಸೆ ಭೀತಿ
ಅಧಿಕಾರ ಎಲ್ಲಿದೆಯೋ ಅಲ್ಲಿಗೆ ರಾಜಕೀಯ ಶಕ್ತಿಗಳು ಧಾವಿಸುವುದು ಸಹಜ. ಹಳೇ ಮೈಸೂರು ಭಾಗದ (ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ) ಸ್ಥಳೀಯ ಜೆಡಿಎಸ್ ನಾಯಕರು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮಟ್ಟದ ಮುಖಂಡರು ಮತ್ತು ಗುತ್ತಿಗೆದಾರರು ತಮ್ಮ ರಾಜಕೀಯ ಭವಿಷ್ಯ ಹಾಗೂ ಹಿತಾಸಕ್ತಿಗಳಿಗಾಗಿ ಕಾಂಗ್ರೆಸ್ ಕಡೆ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ಎಂಥದ್ದೆ ಸಮಸ್ಯೆ ಬಂದಾಗಲೂ ತಳ ಮಟ್ಟದಲ್ಲಿ ತನ್ನ ನೆಲೆಯನ್ನು ಜೆಡಿಎಸ್ ಗಟ್ಟಿಯಾಗಿಯೇ ಇರಿಸಿಕೊಂಡಿತ್ತು. ಈ ಬಾರಿ ಬಿರುಗಾಳಿ ರೀತಿಯಲ್ಲಿ ರಾಜಕೀಯ ಪರ್ವತಗಳು ಅಪ್ಪಳಿಸುವ ಸಾಧ್ಯತೆಗಳು ಇರುವ ಕಾರಣ
ಕೆಳಮಟ್ಟದಲ್ಲಿ ಸಂಘಟನೆಯನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ದೊಡ್ಡ ಸವಾಲಾಗಿದೆ.
* ’ಬಿಡದಿ ಟೌನ್‌ಶಿಪ್’ ಮತ್ತು ಪ್ರಾದೇಶಿಕ ಅಭಿವೃದ್ಧಿ ಕ್ರೆಡಿಟ್ ವಾರ್
ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಲಘಟ್ಟದ ಯೋಜನೆಯಾಗಿದ್ದ ’ಬಿಡದಿ ಟೌನ್‌ಶಿಪ್’ ಸೇರಿದಂತೆ ಹಲವು ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳು ತೆರೆ ಮರೆಗೆ ಸರಿದಿದ್ದವು. ಈಗ ಡಿ.ಕೆ. ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ. ಈ ಯೋಜನೆ ಎಚ್‌ಡಿಕೆ ಕಾಲದ್ದು ಎಂದು ಹೇಳಿ ಅದನ್ನು ಜಾರಿಗೆ ತರಲು ಹೊರಟಿದ್ದರೆ, ಅದರ ವಿರುದ್ದ ಜೆಡಿಎಸ್ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಈ ಭಾಗದಲ್ಲಿ ಅಭಿವೃದ್ಧಿಯ ಸಂಪೂರ್ಣ ಹೆಗ್ಗಳಿಕೆಯನ್ನು ಪಡೆದು, ಕುಮಾರಸ್ವಾಮಿ ಅವರ ಹಿಡಿತವನ್ನು ಸಡಿಲಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಡಿಕೆಶಿ ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆ.
*ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸ್ಥಿರತೆ:
ಕಳೆದ ವಿಧಾನಸಭೆಯಲ್ಲಿ ತತ್ತರಿಸಿ ಹೋಗಿದ್ದ ಜೆಡಿಎಸ್, ಲೋಕಸಭೆ ಚುನಾವಣೆ ಹೊತ್ತಿಗೆ ತನ್ನ ರಾಜಕೀಯ ನಡೆಯನ್ನು ಬಿಜೆಪಿ ಜೊತೆಗೆ ಸಮೀಕರಿಸಿ ಮೈತ್ರಿ ಬೆಸೆದುಕೊಂಡಿತು. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಎರಡೂ ಪಕ್ಷಕ್ಕೆ ಲಾಭವಾಯಿತು. ಆ ಮೂಲಕ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿದು ಬಿಜೆಪಿ, ಜೆಡಿಎಸ್ ಮೈತ್ರಿಕೂಟ 28 ಸ್ಥಾನದಲ್ಲಿ 19 ಸ್ಥಾನಗಳನ್ನು ಪಡೆದಿತ್ತು. ಅಲ್ಲಿಂದಲೂ ಮೈತ್ರಿ ಧರ್ಮ ರಾಜಕಾರಣ ಮುಂದುವರಿದಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಇನ್ನಷ್ಟು ಗಟ್ಟಿಯಾಗಿ ಅವಲಂಬಿತವಾಗಬೇಕಿದೆ. ಅದೇ ಸಮಯದಲ್ಲಿ, ಡಿಕೆಶಿ ಅವರ ಆಕ್ರಮಣಕಾರಿ ರಾಜಕಾರಣದಿಂದಾಗಿ ಜೆಡಿಎಸ್ ನೆಲೆಗಳು ಸಡಿಲಗೊಳ್ಳಬಹುದು ಎನ್ನುವ ಆತಂಕವೂ ದಳಪತಿಗಳಲ್ಲಿ ಇದೆ.
*ಸಂಪನ್ಮೂಲ ಮತ್ತು ಸಂಘಟನಾ ಶಕ್ತಿಯ ಕೊರತೆ
ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಚಾಣಾಕ್ಷತನ ಮತ್ತು ಆರ್ಥಿಕ ಸಂಪನ್ಮೂಲ ಕ್ರೋಢೀಕರಣದಲ್ಲಿ ಮುಂಚೂಣಿಯಲ್ಲಿದ್ದಾರೆ. ವಿರೋಧ ಪಕ್ಷದಲ್ಲಿರುವ ಜೆಡಿಎಸ್‌ಗೆ ಸಂಪನ್ಮೂಲ ಕ್ರೋಢೀಕರಣ ಕೊರತೆಯಿಂದ ಹಿಡಿದು ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ,ತಾಲೂಕು ಪಂಚಾಯತ್ ಚುನಾವಣೆ ಎದುರಿಸುವುದು ಭಾರಿ ಸವಾಲಿನ ಕೆಲಸವಾಗಲಿದೆ.
*ಎಚ್ಡಿಡಿ ಮೇಲೆ ಹೆಚ್ಚಿದ ಒತ್ತಡ
ಡಿಕೆ ಶಿವಕುಮಾರ್ ಅವರು ಪ್ರವರ್ಧಮಾನಕ್ಕೆ ಬಂದರೆ ಒಕ್ಕಲಿಗ ಪಾಳೇಯದಲ್ಲಿ ಏನೆಲ್ಲ ಸಮಸ್ಯೆಗಳು ಮತ್ತು ಪರಿಣಾಮಗಳು ಆಗಬಹುದು ಎನ್ನುವುದನ್ನು ಎರಡು ದಶಕಗಳ ಹಿಂದೆಯೇ ಅಂದಾಜಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಅಪ್ಪಿ ತಪ್ಪಿ ಎಲ್ಲಿಯೂ ಡಿಕೆಶಿಯನ್ನ ಮುಂಚೂಣಿಗೆ ಬಿಡದೆ ಬ್ರೇಕ್ ಹಾಕುತ್ತಲೇ ಬಂದಿದ್ದರು. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿಯೂ ಸಚಿವರಾಗದಂತೆ ನೋಡಿಕೊಂಡಿದ್ದರು. 2018ರಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಒಂದಾದ ಎಚ್ಡಿಕೆ ಮತ್ತು ಡಿಕೆಶಿ ಅವರ ಮೈತ್ರಿ ರಾಜಕಾರಣ ಕೇವಲ ಒಂದು ವರ್ಷಕ್ಕಷ್ಟೆ ಸೀಮಿತವಾಯಿತು. ಮತ್ತೆ ಇಬ್ಬರೂ ನಾಯಕರು ಸಂಘರ್ಷದ ಹಾದಿಯಲ್ಲಿಯೇ ಹೆಜ್ಜೆ ಇಟ್ಟಿದ್ದಾರೆ.
ಹಳೆಮೈಸೂರು ಭಾಗದಲ್ಲಿ ನೆಲೆ ಉಳಿಸಿಕೊಳ್ಳಲು ನಡೆಯುತ್ತಿರುವ ವಾರ್‌ನಲ್ಲಿ ನಾನಾ? ನೀನಾ? ಎನ್ನುವ ಸ್ಥಿತಿ ಎದುರಾಗಿದೆ. ಡಿ.ಕೆ. ಶಿವಕುಮಾರ್ ಅವರ ಆಡಳಿತಾತ್ಮಕ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮೈತ್ರಿ ಪಕ್ಷವಾದ ಬಿಜೆಪಿಯನ್ನು ವಿಶ್ವಾಸಕ್ಕೆ ತಗೆದುಕೊಂಡು ಹಳೇ ಮೈಸೂರು ಭಾಗದಲ್ಲಿ ಜಂಟಿ ಹೋರಾಟ ನಡೆಸದಿದ್ದರೆ ಜೆಡಿಎಸ್ ತನ್ನ ಸಾಂಪ್ರದಾಯಿಕ ಕೋಟೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಕಠಿಣ ಸವಾಲಾಗಲಿದೆ ಎನ್ನುವ ಅಭಿಪ್ರಾಯವನ್ನು ವರಿಷ್ಠರಿಗೆ ನೀಡಲಾಗಿದೆ.
ಇಂಥ ಸಂಘರ್ಷದ ಹೊತ್ತಿನಲ್ಲಿ ಜೆಡಿಎಸ್‌ನದ್ದು ತಂತಿಯ ಮೇಲಿನ ನಡಿಗೆಯೇ ಆಗಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಪಕ್ಷವನ್ನು ಹೇಗೆ ಸುರಕ್ಷಿತವಾಗಿ ದಾಟಿಸಬೇಕು ಎನ್ನುವುದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು. ಈ ಅಗ್ನಿ ಪರೀಕ್ಷೆಯಲ್ಲಿ ಜೆಡಿಎಸ್ ಹೇಗೆ ಪಾರಾಗಬಹುದು ಎನ್ನುವುದೇ ಸದ್ಯಕ್ಕಿರುವ ಕುತೂಹಲ.
*ಒಕ್ಕಲಿಗ ಸಮುದಾಯದ ಪ್ರಬಲ ಕೋಟೆಯಾಗಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಸಾಂಪ್ರದಾಯಿಕವಾಗಿ ಬಲ ಹೊಂದಿದ್ದು, ದೇವೇಗೌಡರ ಕುಟುಂಬವೇ ಇಲ್ಲಿನ ರಾಜಕಾರಣದ ಕೇಂದ್ರಬಿಂದುವಾಗಿತ್ತು. ಆದರೆ ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದರಿಂದ ಜೆಡಿಎಸ್ ಎದುರಿಸಲಿರುವ ಪ್ರಮುಖ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆಯೇ ರಾಜಕೀಯ ಪಡಸಾಲೆಯಲ್ಲಿ ಥರಾವರಿ ಚರ್ಚೆ ನಡೆಯುತ್ತಿದೆ.