ಬಿಜೆಪಿ 
ರಾಜ್ಯ

ಡಿಕೆಶಿ ನಾಯಕತ್ವ ಬಿಜೆಪಿಗೆ ಹೊಸ ಸವಾಲು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ತಿಳಿಗೊಳಿಸುವ ಪ್ರಯತ್ನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಂಗಪ್ರವೇಶ ಮಾಡಿದೆ. ಬಿಜೆಪಿಯ ಕೆಲ ಪ್ರಮುಖರೊಂದಿಗೆ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತು ಸಲಹೆ-ಸೂಚನೆಗಳನ್ನು ನೀಡಿದೆ.
ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಆರ್‌ಎಸ್‌ಎಸ್‌ನ ಪ್ರಮುಖರೊಂದಿಗೆ ನಡೆದ ಬೈಠಕ್‌ನಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿ ಕೆಲ ಪ್ರಮುಖರು ಭಾಗವಹಿಸಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಬಿಜೆಪಿಗೆ ಹೊಸ ಸವಾಲು ಎದುರಾಗಿದೆ. ಅದಕ್ಕೆ ತಕ್ಕಂತೆ ಪಕ್ಷ್ವನ್ನು ಸಂಘಟನೆ ಮಾಡುವ ಅಗತ್ಯವಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆ ಆಗುತ್ತಾರೆ ಎಂಬ ವಿಚಾರಕ್ಕೆ ಹೆಚ್ಚು ಗಮನಕೊಡಬೇಡಿ. ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆ ಮಾಡಲೇಬೇಕು. ಆದ್ದರಿಂದ ಅಧ್ಯಕ್ಷರ ಬದಲಾವಣೆ ಎಂಬುದು ವಿಷಯವಲ್ಲ. ಮೊದಲು ಪಕ್ಷವನ್ನು ಬಲಿಷ್ಠವಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮುಖಂಡರು ಸಲಹೆ ನೀಡಿದ್ದಾರೆ.
ಎಲ್ಲರೂ ಸಾಮೂಹಿಕವಾಗಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಚಿಂತಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಿದರೆ ಭವಿಷ್ಯದಲ್ಲಿ ಪ್ರತಿಲ ಸಿಗುವುದರಲ್ಲಿ ಅನುಮಾನ ಇಲ್ಲ. ಆದ್ದರಿಂದ ಪ್ರತಿ ಹಂತದಲ್ಲೂ ಪಕ್ಷ ಸಂಘಟನೆ ಮತ್ತು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಆರ್‌ಎಸ್‌ಎಸ್ ಮುಖಂಡರು ಸೂಕ್ಷ್ಮವಾಗಿ ಚರ್ಚೆ ನಡೆಸಿ ಸಲಹೆ-ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.