ಬೆಂಗಳೂರು: ಪ್ರತಿ ಗ್ರಾಮ ಪಂಚಾಯತಿ ಮತ್ತು ವಾರ್ಡ್‌ಗಳಲ್ಲಿ ಐವರು ಸದಸ್ಯರನ್ನೊಳಗೊಂಡ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ಇದೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆಸಿ ನಾಯಕರನ್ನು ಸೃಷ್ಟಿಸುತ್ತೇವೆ ಎಂದರು.
ಇದೇ ವೇಳೆ ಯುವ ನಾಯಕತ್ವದ ಬಗ್ಗೆ ಮಾತನಾಡಿದ ಸಿಎಂ ಡಿಕೆಶಿ, ಇದೇ ಶೈಕ್ಷಣಿಕ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳನ್ನು ಪುನರಾರಂಭಿಸುತ್ತೇವೆ ಎನ್ನುತ್ತಾ, ನಾವು ನಾಯಕರನ್ನು ಸೃಷ್ಟಿಸುತ್ತೇವೆಯೇ ಹೊರತು ಅನುಯಾಯಿಗಳನ್ನಲ್ಲ ಎಂದು ಹೇಳಿದರು. ಅಲ್ಲದೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಭರ್ಜರಿಯಾಗಿ ಅಧಿಕಾರಕ್ಕೆ ಬರಲಿದ್ದು, ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಒಂದಿಲ್ಲೊಂದು ಉತ್ತಮ ರಾಜಕೀಯ ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದರು.
ಹೊಸಬರಿಗೆ ಕೊಡಿ!
ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮಾತನಾಡಿ, ಈಗಾಗಲೇ ಎರಡುವರೆ ವರ್ಷಗಳಿಂದ ಅಧಿಕಾರ ಅನುಭವಿಸುತ್ತಿರುವ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ತಕ್ಷಣವೇ ರಾಜೀನಾಮೆ ಪಡೆದು, ಆ ಸ್ಥಾನಗಳನ್ನು ಪಕ್ಷಕ್ಕಾಗಿ ಶ್ರಮಿಸಿರುವ ಹೊಸಬರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಎಂಬುದು ಯಾರ ಒಬ್ಬರ ಸ್ವತ್ತಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕಷ್ಟಪಟ್ಟು ತಂದಿರುವ ಈ ಅಧಿಕಾರವನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬಹಿರಂಗ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೊರಟಿದ್ದು, ಅದನ್ನು ತಡೆಯಲು ಕಾರ್ಯಕರ್ತರು ಬಿ ಕೆ ಹರಿಪ್ರಸಾದ್ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು. ಹರಿಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ 2028, 2029ರ ಚುನಾವಣೆಗಾಗಿ ಅಲ್ಲ, ಪಕ್ಷದ ಸಿದ್ಧಾಂತ ಅನುಷ್ಠಾನಕ್ಕಾಗಿ ಎಂದು ಸ್ಪಷ್ಟಪಡಿಸಿದ ಮಾಜಿ ಸಿಎಂ, ಇನ್ನು ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದು ನೂತನ ಅಧ್ಯಕ್ಷರಿಗೆ ವೇದಿಕೆಯಲ್ಲೇ ಮನವಿ ಮಾಡಿದರು.