ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​  
ರಾಜ್ಯ

ನಮ್ಮದು ಒಂದೇ ಧ್ವನಿ, ಒಂದೇ... 2ನೇ ಬ್ರೇಕ್​ಫಾಸ್ಟ್​ ಮೀಟಿಂಗ್​ ಬಗ್ಗೆ ಸಿಎಂ, ಡಿಸಿಎಂ ಮನದಾಳ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಬ್ರೇಕ್​ಫಾಸ್ಟ್​ ಮೀಟಿಂಗ್​
  • ಡಿಕೆಶಿ ಮನೆಯಲ್ಲಿ ಉಪಹಾರ ಸವಿದ ಸಿದ್ದರಾಮಯ್ಯ
  • ರಾಜಕೀಯ, ಪಕ್ಷಕ್ಕೆ ಸೇರಿ ಹಲವು ವಿಷಯ ಚರ್ಚೆ
ಬೆಂಗಳೂರು: ರಾಜ್ಯ ರಾಜಕಾರಣದ ಗದ್ದುಗೆ ಗುದ್ದಾಟಕ್ಕೆ ಮೊದಲ ವಿರಾಮ ಘೋಷಿಸಿದ್ದ ಸಿಎಂ-ಡಿಸಿಎಂ, ಇಂದು ಮತ್ತೊಂದು ಬಾರಿ ಬ್ರೇಕ್​ಫಾಸ್ಟ್​ ಮೀಟಿಂಗ್​ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ ನಡುವೆ ನಡೆಯುತ್ತಿರುವ ಬಿರುಸಿನ ಜಟಾಪಟಿಗೆ ಈ ಭೇಟಿಗಳು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗುತ್ತಿದೆ. 
ಇಂದು ಡಿಕೆ ಶಿವಕುಮಾರ್​ ಅವರ ಸದಾಶಿವನಗರದ ನಿವಾಸದಲ್ಲಿ ಬೆಳಗ್ಗಿನ ಉಪಹಾರ ಸವಿದ ಸಿಎಂ ಸಿದ್ದರಾಮಯ್ಯ, ಪಕ್ಷಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾಗಿ ಹೇಳಿದ್ದಾರೆ. 

ಬ್ರೇಕ್​ಫಾಸ್ಟ್ ಬಳಿಕ ಸಿಎಂ ನುಡಿ....

"ಡಿ.8ರಿಂದ ಬೆಳಗಾವಿ ಸೆಷನ್ ಶುರುವಾಗುತ್ತದೆ. ಅಲ್ಲಿ ನಮ್ಮ‌ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ.‌ ಯಾವ ಯಾವ ವಿಚಾರಗಳ ಕುರಿತು ಮಾತನಾಡಬೇಕು ಎಂಬುದನ್ನು ಸಮಾಲೋಚಿದ್ದೇವೆ. ವಿಪಕ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎಂಬ ವರದಿ ಇದೆ. ಅದನ್ನು ಒಟ್ಟಾಗಿ ಎದುರಿಸುತ್ತೇವೆ. ನಾವು ರಾಜ್ಯದ ಸಮಸ್ಯೆಯಾಗಿರುವ ಕಬ್ಬು ವಿಚಾರ, ಕೃಷಿ, ಮೆಕ್ಕೆಜೋಳದ ಸಮಸ್ಯೆ ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ" ಎಂದರು.
"ಸರ್ಕಾರ ರೈತರ ಪರವಾಗಿದೆ.‌ ಕಬ್ಬು ಬೆಳೆಗಾರರ ಜತೆ ಈಗಾಗಲೇ ಮಾತನಾಡಿದ್ದೇನೆ. ಅದಕ್ಕೆ ಅಂತಿಮ ರೂಪ ಕೊಡಲು ಯತ್ನಿಸಿದ್ದೇನೆ. ಮೆಕ್ಕೆಜೋಳ ರೈತರ ಬಗ್ಗೆಯೂ ಮಾತನಾಡಿದ್ದೇನೆ. ಎಂಎಸ್​ಪಿ 2400 ನಿಗದಿಯಾಗಿದೆ. ಮಾರುಕಟ್ಟೆ ದರ 1900, 2009 ವ್ಯಾಪ್ರಿಯಲ್ಲಿ ಬೆಲೆ ಇದೆ. ರೈತರಿಗೆ ಎಂಎಸ್​ಲಿ ದರದಲ್ಲಿ ಕೊಡಲು ಡಿಸ್ಟಿಲರಿಯವರನ್ನು ಒಪ್ಪಿಸಿದ್ದೇವೆ. ಸಂಸದರ ಸಭೆ ಬಗ್ಗೆ ಮಾತನಾಡಿದ್ದೇವೆ. ಡಿ.8ರಂದು ಕಲಾಪವೇನಾದರೂ ಮುಂದೂಡಿಕೆಯಾದರೆ ಅಂದೇ ಸಭೆ ಕರೆಯಲು ಚಿಂತಿಸಿದ್ದೇವೆ" ಎಂದು ಹೇಳಿದರು. 
"ಸಮಯ ಕೊಟ್ಟರೆ ಹೈಕಮಾಂಡ್ ಭೇಟಿ ಮಾಡುತ್ತೇನೆ. ಕೆ.ಸಿ.ವೇಣುಗೋಪಾಲ್, ನಾನು ನಾಳೆ ಮಂಗಳೂರು ಕಾರ್ಯಕ್ರಮದಲ್ಲಿ ಭೇಟಿಯಾಗುವ ಸಾಧ್ಯತೆಯಿದೆ. ದೆಹಲಿಯಲ್ಲಿ ಚರ್ಚೆ ಮಾಡಿದ್ದೇನೆ. ಹೈಕಮಾಂಡ್ ಏನು ಹೇಳುತ್ತದೆ ಅದರಂತೆ ನಡೆದುಕೊಳ್ಳುತ್ತೇವೆ. ರಾಹುಲ್ ಗಾಂಧಿ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ನಾವಿಬ್ಬರು ಬದ್ಧ ಎಂದು ಈಗಾಗಲೇ ಹೇಳಿದ್ದೇವೆ. ಈವರೆಗೆ ಹೈಕಮಾಂಡ್ ಜತೆ ನಮಗೆ ಯಾವುದೇ ಸಂಪರ್ಕವಿಲ್ಲ" ಎಂದು ಹೇಳಿದರು. 
"ನಾವು ಸದಾ ಒಗ್ಗಟ್ಟಾಗಿರುತ್ತೇವೆ. ಎಲ್ಲಾ ನಮ್ಮ ಶಾಸಕರು ಒಂದಾಗಿದ್ದಾರೆ. ಒಟ್ಟಾಗಿ ವಿಪಕ್ಷವನ್ನು ಎದುರಿಸಲಿದ್ದಾರೆ. ನಾವು ಯಾವಾಗಲೂ ಅಣ್ಣ-ತಮ್ಮ ಇದ್ದಂತೆ. ಒಂದೇ ಸಿದ್ದಾಂತ ಒಪ್ಪಿಕೊಂಡಿದ್ದೇವೆ, ಈಗಲೂ ಜತೆಗಿದ್ದೇವೆ. 2028ರಲ್ಲೂ ಒಟ್ಟಿಗೆ ಕೆಲಸ ಮಾಡಿ ಚುನಾವಣೆ ಗೆಲ್ಲುತ್ತೇವೆ" ಎಂದು ಸಿದ್ದರಾಮಯ್ಯ ತಿಳಿಸಿದರು. 

ಡಿಸಿಎಂ ಡಿಕೆಶಿ ಪ್ರತಿಕ್ರಿಯೆ

"ಸಿಎಂ ಅವರನ್ನು ಮನೆಗೆ ನಾನೇ ಕರೆದಿದ್ದೆ. ಇಂದು ನಮ್ಮ ನಿವಾಸದಲ್ಲಿ ಮೈಸೂರು ಮೆನು ಬ್ರೇಕ್ ಫಾಸ್ಟ್ ಮಾಡಿಸಿದ್ದೆ. ಉಪಹಾರದ ಸಭೆಯಲ್ಲಿ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಲ್ಕು ಎಂಎಲ್ ಸಿ ಆಯ್ಕೆ ಮಾಡಬೇಕಾಗಿದೆ. ಅದರ ಕುರಿತಾಗಿ ಮಾತನಾಡಿದೆವು. ಸರ್ಕಾರ, ಪಕ್ಷದ ಬಗ್ಗೆ ಚರ್ಚಿಸಿದ್ದೇವೆ. ಅಧಿವೇಶನದಲ್ಲಿ ಏನು ಚರ್ಚೆ ಮಾಡಬೇಕು ಎಂಬದನ್ನೂ ಮಾತನಾಡಿಕೊಂಡಿದ್ದೇವೆ. ನಮ್ಮದು ಒಂದೇ ಧ್ವನಿ, ಒಂದೇ ಆಚಾರ ವಿಚಾರ ಪ್ರತಿಪಕ್ಷವನ್ನು ಒಟ್ಟಾಗಿ ಎದುರಿಸುತ್ತೇವೆ. ವಿಪಕ್ಷ ನಾಯಕರನ್ನೂ ದೆಹಲಿಗೆ ಕರೆದೊಯ್ದು ಸರ್ವ ಪಕ್ಷ ಸಭೆ ನಡೆಸಲು ಯೋಚಿಸಿದ್ದೇವೆ" ಎಂದರು.