DK Shivakumar | 3 ವರ್ಷ ಗಡ್ಡ-ಕೂದಲು ಬಿಟ್ಟಿದ್ದ ಅಭಿಮಾನಿ ಈಶ್ವರಪ್ಪ  
ರಾಜ್ಯ

ಡಿಕೆ ಶಿವಕುಮಾರ್ ಸಿಎಂ ಆಗಲು ಹರಕೆ; 3 ವರ್ಷ ಗಡ್ಡ-ಕೂದಲು ಬಿಟ್ಟಿದ್ದ ಅಭಿಮಾನಿ ಈಶ್ವರಪ್ಪ | DK Shivakumar

ರಾಮನಗರ: ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಬೇಕು ಎಂದು ಹರಕೆ ಹೊತ್ತ ಕಟ್ಟಾ ಅಭಿಮಾನಿ ಕಳೆದ ಮೂರು ವರ್ಷಗಳಿಂದ ಗಡ್ಡ ಮತ್ತು ತಲೆ ಕೂದಲು ತೆಗೆಸದೆ ಹಾಗೆಯೇ ಬಿಟ್ಟಿದ್ದಾರೆ.
ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿಯ ಈಶ್ವರಪ್ಪ ಅವರು ನಾಯಕ ಡಿಕೆಶಿಗಾಗಿ ಹರಕೆ ಹೊತ್ತವರು. ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿಕೆಶಿ 2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಗಲಿದ್ದಾರೆಂದು ನಿರೀಕ್ಷೆ ಹೊತ್ತಿದ್ದರು. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿತ್ತು. ಇದರಿಂದ ಬೇಸತ್ತ ಈಶ್ವರಪ್ಪ ಅವರು, ಶಿವಕುಮಾರ್ ಮುಖ್ಯಮಂತ್ರಿ ಆಗುವವರೆಗೆ ನಾನು ತಲೆ ಕೂದಲು ಮತ್ತು ಗಡ್ಡ ತೆಗೆಸುವುದಿಲ್ಲ ಎಂದು ಅಂದೇ ಪ್ರತಿಜ್ಞೆ ಮಾಡಿದ್ದರು.

ರಾಯರಬಳಿ ನಿವೇದನೆ

ನಮ್ಮ ಸಾಹೇಬರನ್ನು (ಡಿಕೆಶಿ) ಮುಖ್ಯಮಂತ್ರಿಯಾಗಿ ನೋಡುವವರೆಗ ತಲೆ ಕೂದಲು ಮತ್ತು ಗಡ್ಡ ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಇದಾದ ನಂತರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ತೆರಳಿದೆ. ಅಲ್ಲಿನ ತುಂಗಭದ್ರಾ ನದಿಯಲ್ಲಿ ಸಾಹೇಬರ ಭಾವಚಿತ್ರ ಹಿಡಿದುಕೊಂಡು ರಾಯರ ಬಳಿ ಹರಕೆ ಹೊತ್ತಿದ್ದೆ ಎಂದು ಈಶ್ವರಪ್ಪ ತಿಳಿಸಿದರು.

ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು!!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೂ ತೆರಳಿದ್ದ ಈಶ್ವರಪ್ಪ, ತ್ರಿವೇಣಿ ಸಂಗಮದಲ್ಲಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಹಿಡಿದು, ಮುಖ್ಯಮಂತ್ರಿಯಾಗುವ ಭಾಗ್ಯ ಕರುಣಿಸು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ನಂತರ ಆದಿಚುಂಚನಗಿರಿಯ ಕಾಲಭೈರವೇಶ್ವರನಲ್ಲೂ ಪ್ರಾರ್ಥಿಸಿದ್ದರು. ಪ್ರಾರ್ಥನೆಗಳು ಮೂರು ವರ್ಷದ ಬಳಿಕ ಫಲಿಸಿವೆ. ಹಲವು ಸವಾಲುಗಳನ್ನು ಮೆಟ್ಟಿ ನಮ್ಮ ಸಾಹೇಬರು ಕೊನೆಗೂ ಮುಖ್ಯಮಂತ್ರಿ ಹುದ್ದೆ ಏರಲಿದ್ದಾರೆ. ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ನನಗೆ ಇದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ನನ್ನ ಜೀವಮಾನದ ಅತಿ ಖುಷಿಯ ಕ್ಷಣ ಎಂದು ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಹರಕೆ ತೀರಿಸುವ ಬಯಕೆ

ಡಿ.ಕೆ.ಶಿವಕುವಾರ್ ಅವರು ಮುಖ್ಯಮಂತ್ರಿಯಾಗಿ ಪ್ರವಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುವೆ. ಅಲ್ಲಿಂದ ನೇರವಾಗಿ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮೀಜಿಗೆ ಮುಡಿ ಕೊಟ್ಟು ಹರಕೆ ತೀರಿಸುವೆ. ನಂತರ ಪ್ರಯಾಗ್‌ರಾಜ್ ಮತ್ತು ಆದಿಚುಂಚನಗಿರಿಗೂ ತೆರಳಿ ಪೂಜೆ ನೆರವೇರಿಸುವೆ ಎಂದು ಈಶ್ವರಪ್ಪ ತಿಳಿಸಿದರು.

ಪತ್ನಿ ಗೀತಾಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು...

ಈಶ್ವರಪ್ಪ ಅವರು ಹಾರೋಹಳ್ಳಿ ಭಾಗದ ಕಾಂಗ್ರೆಸ್ ಮುಖಂಡರು. ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದಲೇ ಇವರ ಪತ್ನಿ ಗೀತಾ ಅವರಿಗೆ ಒಮ್ಮೆ ಕನಕಪುರ ತಾಪಂ ಚುನಾವಣೆ ಮತ್ತು ಒಮ್ಮೆ ಜಿಪಂ ಚುನಾವಣೆಗೆ ಟಿಕೆಟ್ ಕೊಡಿಸಿದ್ದರು. ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ಇವರಿಗೆ ಟಿಕೆಟ್ ಕೊಡಿಸಿದ್ದು ಮಾತ್ರವಲ್ಲದೆ, ಗೀತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿಯೂ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದರು. ನಮ್ಮ ಸಾಹೇಬರು ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಕಟ್ಟು ಬೀಳುತ್ತಾರೆ. ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಅಂತಹವರಿಗೆ ನಾವು ಜೀವ ಕೊಡುವುದಕ್ಕೂ ಸಿದ್ಧ ಎಂದು ಈಶ್ವರಪ್ಪ ಭಾವುಕರಾಗಿ ನುಡಿದರು.