ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ ಕುಟುಂಬ: ಪ್ರಮಾಣ ವಚನಕ್ಕೂ ಮುನ್ನ ಹುಟ್ಟೂರಿಗೆ ನಿಯೋಜಿತ ಸಿಎಂ ಭೇಟಿ! DK Shivakumar
- ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್
- ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಇಂದು ತಮ್ಮ ಹುಟ್ಟೂರಿಗೆ ಭೇಟಿ ನೀಡಲಿರುವ ಡಿಕೆಶಿ
- ತಂದೆ-ತಾಯಿ ಹಾಗೂ ದೇವರ ಆಶೀರ್ವಾದ ಪಡೆಯಲಿರುವ ನಿಯೋಜಿತ ಮುಖ್ಯಮಂತ್ರಿ
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ( DK Shivakumar ) ಅವರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ತಮ್ಮ ಹುಟ್ಟೂರಿಗೆ ಭೇಟಿ ನೀಡಿ, ತಂದೆ-ತಾಯಿ ಹಾಗೂ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಈ ಮಹತ್ವದ ದಿನದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ರಾಜಧಾನಿ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿ ಸಮೇತರಾಗಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಿನ್ನೆ ತಡರಾತ್ರಿ 2 ಗಂಟೆಯವರೆಗೂ ಮಠದಲ್ಲೇ ಉಳಿದುಕೊಂಡಿದ್ದ ಡಿಕೆಶಿ ಕುಟುಂಬ, ಅಜ್ಜಯ್ಯನ ದರುಷನ ಪಡೆದು ಸುದೀರ್ಘ ಕಾಲ ಪೂಜೆ ಮತ್ತು ಪ್ರಾರ್ಥನೆಗಳಲ್ಲಿ ನಿರತವಾಗಿತ್ತು. ಈ ವಿಶೇಷ ಪೂಜೆಯ ಮೂಲಕ ತಮ್ಮ ಮುಂದಿನ ಆಡಳಿತಾವಧಿ ಸುಗಮವಾಗಿರಲಿ ಎಂದು ಅವರು ಸಂಕಲ್ಪ ಮಾಡಿದರು.
ಮಠದ ಪೂಜೆಯ ಬಳಿಕ ನೂತನ ಸಿಎಂ ತಮ್ಮ ಹುಟ್ಟೂರಾದ ಕನಕಪುರ ತಾಲೂಕಿನ ದೊಡ್ಡಲಹಳ್ಳಿಗೆ ಭೇಟಿ ನೀಡಲಿದ್ದಾರೆ. ಗ್ರಾಮಕ್ಕೆ ಆಗಮಿಸಲಿರುವ ಅವರು ಮೊದಲು ತಾಯಿ ಗೌರಮ್ಮ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯಲಿದ್ದಾರೆ. ತದನಂತರ ತಮ್ಮ ತಂದೆ ಹಾಗೂ ಅಜ್ಜ-ಅಜ್ಜಿಯ ಸಮಾಧಿ ಸ್ಥಳಕ್ಕೆ ತೆರಳಿ ಗೌರವಪೂರ್ವಕವಾಗಿ ಪೂಜೆ ಸಲ್ಲಿಸಲಿದ್ದಾರೆ.
ಕುಟುಂಬದ ಹಿರಿಯರ ಆಶೀರ್ವಾದ ಪಡೆದ ನಂತರ ಡಿ.ಕೆ. ಶಿವಕುಮಾರ್ ಅವರು ತಮ್ಮ ಕುಲದೇವತೆಯಾದ ಕಂಕೇರಮ್ಮ, ಪ್ರಸಿದ್ಧ ಕಬ್ಬಾಳಮ್ಮ ಹಾಗೂ ಸ್ಥಳೀಯ ಶಿವ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ, ಡಿಕೆಶಿ ಅವರ ಈ ಜನ್ಮಭೂಮಿ ಹಾಗೂ ದೇವಸ್ಥಾನಗಳ ಭೇಟಿ ತೀವ್ರ ಕುತೂಹಲ ಮತ್ತು ಭಕ್ತಿಯ ಆಚರಣೆಯಾಗಿ ಮಾರ್ಪಟ್ಟಿದೆ.
ಅಂದಹಾಗೆ ಇಂದು ಸಂಜೆ 4.05 ಗಂಟೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನ ಗ್ಲಾಸ್ಹೌಸ್ನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲರು ನೂತನ ಮುಖ್ಯಮಂತಿಗೆ ಪದವಿ ಹಾಗೂ ಗೌಪ್ಯತಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜೊತೆಗೆ 14 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರ ರಾಜಕಾರಣದ ದಿಗ್ಗಜರು, ವಿವಿಧ ರಾಜ್ಯಗಳ ಮುಖಂಡರು ಹಾಗೂ ನಾಡಿನ ಸಾಂಸ್ಕೃತಿಕ, ಸಾಮಾಜಿಕ ವಲಯದ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರಮುಖವಾಗಿ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಸಿಎಂಗಳಾದ ವಿ.ಡಿ.ಸತೀಶನ್, ರೇವಂತ ರೆಡ್ಡಿ, ಸುಖವೀಂದರ್ ಸಿಂಗ್ ಸುಖು ಸೇರಿದಂತೆ ಎಐಸಿಸಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಮಹತ್ವದ ಘೋಷಣೆ ನಿರೀಕ್ಷೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ.ಶಿವಕುಮಾರ್ ತಮ್ಮ ನೇತೃತ್ವದಲ್ಲಿ ನಡೆಯುವ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ಮೂರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಶಿಕ್ಷಣ, ನೀರಾವರಿ ಕ್ಷೇತ್ರ ಹಾಗೂ ಬೆಂಗಳೂರಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.