ರಾಜಕೀಯ ರಂಗದ ಮಹಾ ಕುಬೇರ: ಡಿಕೆಶಿ ಬಳಿ ಇರೋ ಆಸ್ತಿ ವಿವರ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! DK Shivakumar
- ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜಕೀಯ ರಂಗದ ಮಹಾ ಕುಬೇರ ಎಂದೇ ಗುರುತಿಸಿಕೊಂಡಿದ್ದಾರೆ
- 2023ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಬರೋಬ್ಬರಿ 1,400 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ
- ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳ ಸಾಲಿನಲ್ಲಿ ಡಿಕೆ ಶಿವಕುಮಾರ್ ಅವರು ಮುಂಚೂಣಿಗೆ ಬಂದು ನಿಂತಿದ್ದಾರೆ
- ಇದೀಗ ಮುಂದಿನ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿರುವುದರಿಂದ ಡಿಕೆಶಿ ಆಸ್ತಿ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ
ಬೆಂಗಳೂರು: ರಾಜಕೀಯ ರಂಗದ 'ಮಹಾ ಕುಬೇರ' ಎಂದೇ ಗುರುತಿಸಲ್ಪಡುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ( DK Shivakumar ) ತಮ್ಮ 2023ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಬರೋಬ್ಬರಿ 1,400 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಇಡೀ ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳ ಸಾಲಿನಲ್ಲಿ ಮುಂಚೂಣಿಗೆ ಬಂದು ನಿಂತಿದ್ದಾರೆ. ರಾಜಕೀಯ ಪಡಸಾಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಅವರ ಈ ದೈತ್ಯ ಆಸ್ತಿಯ ವಿವರ, ಇದೀಗ ದೇಶದಾದ್ಯಂತ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
2023ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನ ಪ್ರಕಾರ, ಡಿ.ಕೆ. ಶಿವಕುಮಾರ್ ಮತ್ತು ಅವರ ಅವಲಂಬಿತರ ಒಟ್ಟು ಆಸ್ತಿಯ ಮೌಲ್ಯ 1,413.78 ಕೋಟಿ ರೂ. ಎಂದು ಘೋಷಿಸಲಾಗಿದೆ. ಇದು 2018ರ ಚುನಾವಣೆಯಲ್ಲಿ ಅವರು ಘೋಷಿಸಿದ್ದ 840.08 ಕೋಟಿ ರೂ. ಆಸ್ತಿಗೆ ಹೋಲಿಸಿದರೆ ಭಾರಿ ಏರಿಕೆಯನ್ನು ಕಂಡಿದೆ. ಈ ಒಟ್ಟು ಆಸ್ತಿಯಲ್ಲಿ ಅವರ ಕುಟುಂಬವು 273.42 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 1,140.36 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದೆ. ಇದರಲ್ಲಿ ಸ್ವತಃ ಶಿವಕುಮಾರ್ ಅವರ ಹೆಸರಿನಲ್ಲೇ 972.65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ವರದಿಗಳು ತಿಳಿಸಿವೆ.
ಇನ್ನು ಆಸ್ತಿಯ ಜೊತೆಗೆ ಡಿಕೆ ಶಿವಕುಮಾರ್ ಅವರು ಸುಮಾರು 263 ಕೋಟಿ ರೂಪಾಯಿಗಳ ಸಾಲ ಇರುವುದಾಗಿಯೂ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಕನಕಪುರ ಕ್ಷೇತ್ರದ ಶಾಸಕರಾದ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಕೇವಲ ಒಂದೇ ಒಂದು ನೋಂದಾಯಿತ ವಾಹನವಿದ್ದು, ಅದು 'ಟೊಯೋಟಾ ಕ್ವಾಲಿಸ್' ಆಗಿದೆ. ಇದರೊಂದಿಗೆ ಅವರ ಬಳಿ ರೋಲೆಕ್ಸ್ ಮತ್ತು ಹೂಬ್ಲೋಟ್ ನಂತಹ ಅತ್ಯಂತ ದುಬಾರಿ ಐಷಾರಾಮಿ ಕೈಗಡಿಯಾರಗಳು ಹಾಗೂ ಗಣನೀಯ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಸಂಗ್ರಹ ಇರುವುದು ಈ ಘೋಷಣೆಯಿಂದ ಬಹಿರಂಗವಾಗಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಒಟ್ಟು 19 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿದ್ದವು ಎಂಬ ಅಂಶವೂ ಸಹ ಅವರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖವಾಗಿದೆ.
ಸೋಲಿಲ್ಲದ ಸರದಾರ
ಅಂದಹಾಗೆ, ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಡಿ.ಕೆ. ಶಿವಕುಮಾರ್ ಅವರು ಸದ್ಯ ರಾಜ್ಯದ ಉಪಮುಖ್ಯಮಂತ್ರಿಯಾಗಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 1980ರ ದಶಕದಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಅವರು, 1989ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿರುವ ಶಿವಕುಮಾರ್ ಅವರು, ರಾಜ್ಯ ಸರ್ಕಾರಗಳಲ್ಲಿ ಇಂಧನ ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ತದನಂತರ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ ಬಳಿಕ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಪಟ್ಟ
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಮುಖ ಸಾಂಸ್ಥಿಕ ತಂತ್ರಜ್ಞ ಎಂದೇ ಗುರುತಿಸಲ್ಪಡುವ ಡಿ.ಕೆ. ಶಿವಕುಮಾರ್ ಅವರು, 2017ರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದಾದ್ಯಂತ ಭಾರಿ ಗಮನ ಸೆಳೆದಿದ್ದರು. ಅಂದು ಪಕ್ಷಾಂತರ ಭೀತಿಯಲ್ಲಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಕರೆತಂದು, ಸುರಕ್ಷಿತವಾಗಿ ಇರಿಸುವಲ್ಲಿ ಯಶಸ್ವಿಯಾಗುವ ಮೂಲಕ ಅವರು ರಾಷ್ಟ್ರ ಮಟ್ಟದಲ್ಲಿ ತಮ್ಮ ಧೀಮಂತ ನಾಯಕತ್ವ ಮತ್ತು ರಾಜಕೀಯ ಚಾಣಾಕ್ಷತೆಯನ್ನು ಸಾಬೀತುಪಡಿಸಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆಯ ಸೂತ್ರದ ಅಡಿಯಲ್ಲಿ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೇರುವ ಅವಕಾಶ ಸಿಕ್ಕಿದೆ. ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಸಿಎಂ ಡಿಕೆಶಿ ಅನ್ನೋದು ಬಹುತೇಕ ಖಚಿತವಾಗಿದೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.