ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ 
ರಾಜ್ಯ

ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ | D K Shivakumar

ಬೆಂಗಳೂರು: ತೀವ್ರ ಕೂತುಹಲ ಮೂಡಿಸಿದ್ದ ರಾಜ್ಯದ ನೂತನ ಸಿಎಂ ಯಾರು ಎಂಬ ಬಗ್ಗೆ ವಿಷಯಕ್ಕೆ ತೆರೆ ಬಿದ್ದಿದ್ದು, ನಿರೀಕ್ಷೆಯಂತೆ ನೂತನ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ನಾಯಕನಾಗಿ ಡಿ.ಕೆ.ಶಿವಕುಮಾರ್(D K Shivakumar) ಆಯ್ಕೆಯಾಗಿದ್ದಾರೆ. ಇಂದು ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿಎಲ್​ಪಿ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಡಿಕೆಶಿ ಹೆಸರನ್ನು ಘೋಷಣೆ ಮಾಡಿದ್ದು, ಡಾ.ಜಿ.ಪರಮೇಶ್ವರ್ ಅನುಮೋದಿಸಿದ್ದಾರೆ.
ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ಹಿರಿಯ ನಾಯಕರು ಮತ್ತು ಪಕ್ಷದ ಎಲ್ಲಾ ಶಾಸಕರು ಭಾಗವಹಿಸಿದ್ದರು.
ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಗೌರವ ನಿರ್ಣಯ ಮಂಡಿಸಲಾಗಿದ್ದು, ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಿರ್ಣಯ ಮಂಡಿಸಿದ್ದಾರೆ. ಸಿಎಂ ಆಗಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯವಾದ ಅರ್ಪಿಸಿ ನಿರ್ಣಯ ಕೈಗೊಳ್ಳಲಾಗಿದೆ. ಇನ್ನೂ ಸಭೆ ಬಳಿಕ ರಾಜ್ಯಭವನಕ್ಕೆ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕರು ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಬುಧವಾರ ಪ್ರಮಾಣವಚನ ಸ್ವೀಕಾರ

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದು, ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದ ಗಾಜಿನ ಮನೆಯಲ್ಲಿ ಸರಳವಾಗಿ ಸಮಾರಂಭ ನಡೆಯಲಿದೆ. ಡಿಕೆ ಶಿವಕುಮಾರ್​ ಅವರೊಂದಿಗೆ ನೂತನ ಸಚಿವ ಸಂಪುಟ ಪದಗ್ರಹಣ ನಡೆಯಲಿದೆ.
ವಿಧಾನಸೌಧದ ಬಳಿ ಪದಗ್ರಹಣ ಸಮಾರಂಭ ನಡೆಯಬೇಕು ಎನ್ನುವುದು ಡಿಕೆ ಶಿವಕುಮಾರ್​ ಅವರ ಆಶಯವಾಗಿತ್ತು. ಆದರೆ ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಸರಳವಾಗಿ ಆಚರಿಸಲು ಹೈಕಮಾಂಡ್ ಸೂಚಿಸಿದ್ದು, ಈ ಹಿನ್ನೆಲೆ ಸರಳವಾಗಿ ಲೋಕಭವನದ ಗ್ಲಾಸ್​ಹೌಸ್​​ನಲ್ಲಿ ಸಮಾರಂಭ ನಡೆಯಲಿದೆ.