ಬೆಂಗಳೂರು: ವಿಚ್ಚೇದನ ಪ್ರಕರಣವೊಂದರ ಜೀವನಾಂಶ ನೀಡುವ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪತಿಗಿಂತ ಹೆಚ್ಚು ಸಂಪಾದಿಸುವ ಪತ್ನಿ ತಾನೂ ಮಹಿಳೆ ಎಂಬ ಕಾರಣಕ್ಕೆ ಜೀವನಾಂಶ(Alimony) ಪಡೆಯಲು ಅರ್ಹಳಲ್ಲ ಎಂದು ಪತ್ನಿಗೆ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ 20,000 ರೂ.ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ತನ್ನ ಪತ್ನಿ ತಿಂಗಳ ಆದಾಯ 1 ಲಕ್ಷ ರೂ. ಆಗಿದ್ದರೆ, ನನ್ನ ಮಾಸಿಕ ವೇತನ 60,646 ರೂ. ಹೀಗಾಗಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಗೆ ತಿಂಗಳಿಗೆ 20 ಸಾವಿರ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಚಿಲ್ಲಕೂರ್ ಸುಮಲತಾ ಅವರ ನೇತೃತ್ವದ ಏಕಸದಸ್ಯ ಪೀಠ, ಪತ್ನಿಯರು ಯಾವಾಗಲೂ ಗಂಡಂದಿರಿಂದ ನಿರ್ವಹಣೆ ಪಡೆಯಬೇಕು ಎಂಬ ಊಹೆಯಿಂದ ಕೌಟುಂಬಿಕ ನ್ಯಾಯಾಲಯಗಳು ಪ್ರಭಾವಿತವಾಗಬಾರದು. ಅಂತಹ ಆದೇಶಗಳನ್ನು ನೀಡುವ ಮೊದಲು ಎರಡೂ ಪಕ್ಷಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಹೇಳಿದೆ.
ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದರೆ ಮತ್ತು ಹೆಂಡತಿಯ ಆದಾಯವು ಗಂಡನ ಆದಾಯಕ್ಕಿಂತ ಹೆಚ್ಚಿದ್ದರೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಇತರ ಹೊಣೆಗಾರಿಕೆಗಳು ಹೆಂಡತಿಯ ಕಡೆಯಿಂದ ಕಂಡುಬರದಿದ್ದರೆ, ಮಹಿಳೆಯರಿಗೆ ಪುರುಷರು ನಿರ್ವಹಣೆ ಮಾಡಬೇಕು ಅಥವಾ ಹೆಂಡತಿಯನ್ನು ಆಕೆಯ ಗಂಡನೇ ನಿರ್ವಹಣೆ ಮಾಡಬೇಕು ಎಂಬ ಆಧಾರದ ಮೇಲೆ ನ್ಯಾಯಾಲಯಗಳು ಜೀವನಾಂಶ ನೀಡುವ ಆದೇಶವನ್ನು ಹೊರಡಿಸಬಾರದು ಎಂದು ಅಭಿಪ್ರಾಯಪಟ್ಟಿದೆ.
ಪತ್ನಿಗೆ ತನ್ನ ಗಂಡನಂತೆಯೇ ಜೀವನ ನಿರ್ವಹಣೆಗೆ ಯಾವುದೇ ಮಾರ್ಗವಿಲ್ಲದಿದ್ದಾಗ ಮಾತ್ರ ಜೀವನಾಂಶ ನೀಡಬೇಕು. ಪತ್ನಿಯೂ ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯ ಒಪ್ಪಿಕೊಂಡಿದ್ದು, ಅದು ಆಕೆಯ ಪತಿಯ ಸಂಬಳಕ್ಕಿಂತ ಹೆಚ್ಚಿದೆ. ಒಪ್ಪಿಕೊಂಡಿರುವ 1,00,000 ರೂ. ಆದಾಯದೊಂದಿಗೆ ಆಕೆ ತನ್ನನ್ನು ತಾನು ನಿರ್ವಹಿಸಿಕೊಳ್ಳಬಹುದು. ಆದ್ದರಿಂದ, ವಿಚಾರಣಾ ನ್ಯಾಯಾಲಯವು ಪತಿಗೆ ತಿಂಗಳಿಗೆ 60,646 ರೂ. ಗಳಿಕೆಯಲ್ಲಿ 20,000 ರೂ.ಗಳನ್ನು ಪಾವತಿಸಲು ಆದೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಮುಂದುವರೆದು ಪೀಠವು, ಈ ತೀರ್ಪು ಪ್ರಶ್ನಿಸಲಾದ ಮಧ್ಯಂತರ ನಿರ್ವಹಣಾ ಆದೇಶಕ್ಕೆ ಸೀಮಿತವಾಗಿದೆ. ಮತ್ತು ವೈವಾಹಿಕ ಪ್ರಕ್ರಿಯೆಗಳ ಅಂತಿಮ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪರಿಸ್ಥಿತಿಯಲ್ಲಿ ಬದಲಾವಣೆಯಾದರೆ ಭವಿಷ್ಯದಲ್ಲಿ ಪತ್ನಿ ಜೀವನಾಂಶವನ್ನು ಪಡೆಯಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿದೆ.
ಪತ್ನಿವಾದವೇನು?
ಪತ್ನಿ ತಾನೂ ತಿಂಗಳಿಗೆ 1 ಲಕ್ಷ ರೂ. ಸಂಪಾದಿಸುತ್ತಿದ್ದೇನೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದರು, ತನ್ನ ಮದುವೆಗೆ ಮಾಡಿದ ಸಾಲಗಳನ್ನು ತೀರಿಸಲು ಜೀವನಾಂಶ ಮೊತ್ತದ ಅಗತ್ಯವಿದೆ ಎಂದು ಪ್ರತಿವಾದಿಸಿದ್ದರು. ಆದರೆ ಬಾಕಿ ಇರುವ ಸಾಲಗಳು, ಪಾವತಿಸದ ಮೊತ್ತಗಳು ಅಥವಾ ಇಎಂಐಗಳ ಯಾವುದೇ ವಿವರಗಳನ್ನು ಅವರು ತಮ್ಮ ಅಫಿಡವಿಟ್‌ನಲ್ಲಿ ನೀಡಲು ವಿಫಲರಾಗಿದ್ದರು ಎನ್ನಲಾಗಿದೆ (ಏಜೆನ್ಸೀಸ್).