ಬಸವ ಪರಿಷತ್ ಆಯೋಜಿಸಿದ್ದ ಸಮಾರಂಭದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸೇವೆಯನ್ನು ಪರಿಗಣಿಸಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ 2026ನೇ ಸಾಲಿನ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಸವಧರ್ಮ ಪೀಠದ ಡಾ. ಮಾತೆ ಗಂಗಾದೇವಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಸ್ವಾತಂತ್ರ್ಯ ನಂತರ ಭಾರತೀಯರ ವಿಭಜನೆ ದುರದೃಷ್ಟಕರ; ಮಾಜಿ ಸಿಎಂ ಬೊಮ್ಮಾಯಿ ಬೇಸರ

ವಿವಿಧ ಕ್ಷೇತ್ರದ ಸಾಧಕರಿಗೆ ಬಸವ ಪುರಸ್ಕಾರ ಪ್ರದಾನ

ಬೆಂಗಳೂರು : ದೇಶದಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಬ್ರಿಟೀಷರ ವಿರುದ್ದ ಒಂದಾಗಿ ಹೋರಾಡಿದ ಭಾರತೀಯರು ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ಸ್ವಾತಂತ್ರ್ಯ ಭಾರತದಲ್ಲಿ ವಿವಿಧ ಕಾರಣಗಳಿಗೆ ಜನ ವಿಭಜನೆ ಆಗುತ್ತಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಸವ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಬಸವ ಪುರಸ್ಕಾರ 2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಭಗವಂತ ನಮಗೆ ಬುದ್ದಿ ಶುಕ್ತಿ, ವಿಚಾರ ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅಭಿವ್ಯಕ್ತ ಧ್ವನಿ ಕೊಟ್ಟಿದ್ದಾನೆ. ಆ ವಿಶೇಷ ಗುಣದಿಂದ ಸಾಧನೆ ಮಾಡಿದ ಹಲವರಿದ್ದಾರೆ. ಈ ಜಗತ್ತಿನಲ್ಲಿ ಬದಲಾವಣೆ ತಂದವರು ಯಾವುದೇ ದೇಶ, ಆರ್ಮಿಯಲ್ಲ. ಬದಲಾಗಿ ಪ್ರತ್ಯೇಕ ವ್ಯಕ್ತಿಗಳು. ಆ ಕಾರಣದಿಂದಲೇ ಬುದ್ದ ಬಸವ, ಕ್ರಿಸ್ತ, ಮಹಾವೀರ, ಪೈಗಂಬರ್ ಎಲ್ಲರೂ ಕಾಲ ಮತ್ತು ಭೂಮಿಯ ಮಿತಿಮೀರಿ ಬೆಳೆದಿದ್ದಾರೆ. ವ್ಯವಸ್ಥೆಯಲ್ಲಿ ಬದಲಾವಣೆ ತರುವವರಲ್ಲಿ ಒಂದು ಸಮಸ್ಯೆ ಇದೆ. ವ್ಯವಸ್ಥೆ ಬದಲಾವಣೆ ಆಗುವವರೆಗೂ ಒಂದೇ ಗುರಿ ಇರುತ್ತದೆ. ನಂತರ ಮನಸ್ಥಿತಿ ಬದಲಾಗುತ್ತದೆ. ಇದಕ್ಕೆ ಚೀನಾ, ಫ್ರೆಂಚ್ , ರಷ್ಯಾ ದೇಶಗಳ ಕ್ರಾಂತಿ ವಿಫಲವಾಗಿದ್ದು ಉತ್ತಮ ಉದಾಹರಣೆ. ಒಬ್ಬ ಮನುಷ್ಯ ಮಾನವ ಆಗಲು, ದೇವ ಮಾನವ ಆಗಲು ಸಾಧ್ಯ. ಅಂತಹ ಬದುಕು ಸಾಗಿಸುವ ಕೆಲಸ ಬಸವಣ್ಣ ಮಾಡಿದ್ದಾರೆ.

ಅರ್ಹರಿಗೆ ಪ್ರಶಸ್ತಿ ಕೊಟ್ಟಾಗ ಮನಸಿಗೆ ಸಂತೋಷ ವಾಗುತ್ತದೆ. ಸನ್ಮಾನಿತರೆಲ್ಲರೂ ಕಾಯಕ ನಿಷ್ಟೆಯ ಬದುಕು ನಡೆಸಿದವರು. ಮಹಾಂತೇಶ ಕವಟಗಿಮಠ ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದವರು. ಕೆಎಲ್‌ಇ ಸಂಸ್ಥೆಯಲ್ಲಿ ಬಹಳ ಕಾಲ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಒಂದು ಬ್ಯಾಂಕ್‌ನ್ನು ಕೂಡಾ ಸ್ಥಾಪಿಸಿದ್ದಾರೆ. ಜೊತೆಗೆ ಅಣ್ಣಾಸಾಹೇಬ್ ಜೊಲ್ಲೆ, ನ್ಯಾ. ಸಂತೋಷ ಹೆಗ್ಡೆ, ನಟ ಡಾ. ಶಿವರಾಜಕುಮಾರ ಮತ್ತಿತರರನ್ನು ಇಲ್ಲಿ ಸನ್ಮಾನಿಸಿದ್ದು ಪ್ರಶಸ್ತಿಯ ಘನತೆ ಹೆಚ್ಚಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮತ್ತಿತರರು ಹಾಜರಿದ್ದರು. ಪರಿಷತ್ತಿನ ಗೌರವಾಧ್ಯಕ್ಷೆ ಎಂ.ಸಿ.ಉಮಾದೇವಿ, ಅಧ್ಯಕ್ಷೆ ರೇಖಾ ಮಹಾಂತೇಶ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಕೆಎಲ್‌ಇ ಸಂಸ್ಥೆಯ ಹಿರಿಯರಿಗೆ ಪ್ರಶಸ್ತಿ ಅರ್ಪಿಸಿದ ಕವಟಗಿಮಠ್

ಬಸವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ತಮಗೆ ದೊರೆತ ಈ ಅತ್ಯುನ್ನತ ಗೌರವವನ್ನು ಕೆಎಲ್‌ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರು ಮತ್ತು ಸಂಸ್ಥೆಯ ಅಬ್ಯುದಯಕ್ಕೆ ದುಡಿಯುತ್ತಿರುವ ಎಲ್ಲ ಶಿಕ್ಷಕರು ಹಾಗು ಸಿಬ್ಬಂದಿಗಳಿಗೆ ಅರ್ಪಿಸುವುದಾಗಿ ಘೋಷಿಸಿದರು.

ಬಸವಣ್ಣನವರು ಸಮಾನತೆಯ ಹರಿಕಾರರು. ಸಮಸಮಾಜ ನಿರ್ಮಾಣದ ಆಶಯದೊಂದಿಗೆ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಮಹಾನ್ ಚೇತನ. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಬಸವ ಪುರಸ್ಕಾರ ಸ್ವೀಕರಿಸಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ.

ಸಾರ್ವಜನಿಕ ಜೀವನದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಕೆಎಲ್‌ಇ ಶಿಕ್ಷಣ ಸಂಸ್ಥೆ, ದೂದ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ದೊರೆತಿರುವ ಈ ಗೌರವವನ್ನು ಕೆಎಲ್‌ಇ ಸಂಸ್ಥೆ ಕಟ್ಟಿದ ಹಿರಿಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ಸಮರ್ಪಿಸುವುದಾಗಿ ಅವರು ಹೇಳಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಬಸವ ಪುರಸ್ಕಾರ

ನ್ಯಾ.ಸಂತೋಷ್ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ನಟ ಡಾ. ಶಿವರಾಜಕುಮಾರ್, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ, ಕೆಎಸ್‌ಡಿಎಲ್ ಎಂ.ಡಿ. ಡಾ. ಪಿ.ಕೆ.ಎಂ ಪ್ರಶಾಂತ, ಉದ್ಯಮಿ ಡಾ. ಮಹೇಶ ಬೆಲ್ಲದ್, ಸಹಕಾರಿ ಧುರೀಣ ಭೀಮರಾವ್ ಪಾಟೀಲ್, ಅಬಕಾರಿ ಇಲಾಖೆ ಉಪಆಯುಕ್ತ ಡಾ.ಬಿ.ಆರ್. ಹಿರೇಮಠ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಶಿಕ್ಷಣ ತಜ್ಞ ಎ.ಎಸ್.ಪಾಟೀಲ್, ಪತ್ರಕರ್ತ ಚಿತ್ತಾರ ಶಿವಕುಮಾರ್ ಇವರಿಗೆ ಬಸವ ಪುರಸ್ಕಾರ-2026 ನೀಡಿ ಗೌರವಿಸಲಾಯಿತು.

ಹಿಂದೆಲ್ಲಾ ಸಮಾಜ ಒಳ್ಳೆ ಕೆಲಸ ಮಾಡಿದವರನ್ನು ಗುರುತಿಸಿ ಪುರಸ್ಕರಿಸುತ್ತಿತ್ತು. ಇಂದಿನ ಸಮಾಜದ ಭಾವನೆ ಬದಲಾಗಿದೆ. ಪ್ರಾಮಾಣಿಕರಿಗೆ ಇಂದು ಬೆಲೆ ಇಲ್ಲದಂತಾಗಿದ್ದು, ಇದಕ್ಕೆ ಕಾರಣ ದುರಾಸೆ. ಹಿಂದೆ ತಮ್ಮ ಮಕ್ಕಳಿಗೆ ‘ಮನೆಗೆ ಒಳ್ಳೆಯ ಮಗನಾಗು ದೇಶಕ್ಕೆ ಒಳ್ಳೆಯ ಪ್ರಜೆಯಾಗು’ ಎನ್ನುತ್ತಿದ್ದರು. ಆದರೆ ಇಂದು ಏನಾದರೂ ಮಾಡು ಶ್ರೀಮಂತನಾಗು ಎನ್ನುತ್ತಿದ್ದಾರೆ.
ನ್ಯಾ. ಸಂತೋಷ್ ಹೆಗಡೆ, ಮಾಜಿ ಲೋಕಾಯುಕ್ತ
40 ವರ್ಷದ ಚಿತ್ರೋದ್ಯಮದ ಅನುಭವದಲ್ಲಿ ಜನರಿಂದ ದೊರೆತ ಪ್ರೇರಣೆಯೇ ಎಲ್ಲ ಸಾಧನೆಗೆ ಕಾರಣ. ಪಾರ್ಟಿ, ಪಕ್ಷಕ್ಕಿಂತ ವಿಶ್ವಾಸ ದೊಡ್ಡದು. ನಮ್ಮ ತಂದೆಯವರು ಸಿದ್ದಾರೂಢರ ಭಕ್ತರಾಗಿದ್ದರು. ಇಂದಿಗೂ ಹುಬ್ಬಳ್ಳಿಗೆ ಹೋದಾಗ ಸಿದ್ದಾರೂಢ ಮಠಕ್ಕೆ ಹೋಗದೆ ಬರುವುದಿಲ್ಲ. ಆ ಭಕ್ತಿ ಗೌರವಗಳಿಂದಲೇ ಆರೋಗ್ಯದ ಸಮಸ್ಯೆ ಇದ್ದರೂ ಬಸವ ಪುರಸ್ಕಾರ ಸ್ವೀಕಾರಕ್ಕೆ ಬಂದಿದ್ದೇನೆ.
ಡಾ.ಶಿವರಾಜ ಕುಮಾರ್, ನಟ