ಯಾದಗಿರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಅವರ ನಿವಾಸಕ್ಕೆ ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾಮದ ರೈತರು ತೆರಳಿ ಹಳ್ಳದ ಮೇಲೆ ರಸ್ತೆ ನಿಮಿಸುವಂತೆ ಮನವಿ ಮಾಡಿದರು.
ಗುರುಮಠಕಲ್: ತಾಲೂಕಿನ ಪುಟಪಾಕ ಗ್ರಾಮದಲ್ಲಿ ಹಳ್ಳವನ್ನು ದಾಟಲು ರೈತರಿಗೆ ದಾರಿ ನಿರ್ಮಿಸಿಕೊಡಬೇಕೆಂದು ರೈತರ ಮನವಿಗೆ ಸ್ಪಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಕುರಿತು ಅನಪುರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ ರೈತರು, ಗ್ರಾಮದ ಹೊರವಲಯದಲ್ಲಿ ಹಳ್ಳವಿದ್ದು, ಗ್ರಾಮದ ರೈತರು ಹಳ್ಳ ದಾಟಿ ತಮ್ಮ ಹೊಲಗಳಿಗೆ ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ನೀರು ತುಂಬಿ ಹಳ್ಳ ದಾಟಲು ಪರದಾಟ ಪಡುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿಸಿಕೊಳ್ಳಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ತಮ್ಮ ನೋವು ತೋಡಿಕೊಂಡರು.
ಈ ಕುರಿತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಾವು ಮಾಡಿಕೊಡಬೇಕು ಎಂದು ಮನವಿ ಮಾಡಿದಾಗ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಈ ವೇಳೆ ರೈತರಾದ ರಾಮುಲು, ಬಸಪ್ಪ, ವೆಂಕಟಪ್ಪ ಪೆದ್ದ ತಿಪ್ಪಣ್ಣ, ಬಸಪ್ಪ ಕಾವಲಿ, ರಾಮುಲು ಕಾವಳಿ, ಮಹೇಶ ಕಾವಲಿ, ನಾರಾಯಣ ಸಂದೋಳ, ಬಸಪ್ಪ ತೆಲುಗು, ವೆಂಟಕಪ್ಪ ಬಾಯಿಕಾಡಿ, ಮಲ್ಲೇಶ ತಲಾರಿ, ವೆಂಕಟಪ್ಪ ಬುಡ್ಡ, ಖಾಸೀಂ ಅಲಿ, ಖಾದರ್ ದಾನಂ ಇತರರಿದ್ದರು.