ಕವಿ ಸಮ್ಮೇಳನ ಆಯೋಜನೆ ಹಿನ್ನೆಲೆಯಲ್ಲಿ ಕಲಬುರಗಿ ಕನ್ನಡ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿಜಯಕುಮಾರ ಪಾಟೀಲ್ ಮಾತನಾಡಿದರು. ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ್ ಛಪ್ಪರಬಂದಿ, ಜಯಶ್ರೀ ಜಮಾದಾರ್ ಇತರರಿದ್ದರು.
- ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ
- ಕನ್ನಡ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆ
ಕಲಬುರಗಿ: ಹೊಸ ಪ್ರತಿಭೆ ಪ್ರೋತ್ಸಾಹಿಸುವ ಮತ್ತು ಕನ್ನಡ ಸಾಹಿತ್ಯ ಪರಂಪರೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕನ್ನಡದ ಅಸ್ಮಿತೆಯ ಪ್ರತಿಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಟದ ಆಶ್ರಯದಲ್ಲಿ ಮೇ ಅಂತ್ಯದಲ್ಲಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದರು.
ಕನ್ನಡ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಹೊಸ ಬರಹಗಾರರು ಸಮಾಜದ ಮಿಡಿತ ಅರಿತು, ಅದನ್ನು ಬದುಕಿನ ಅನುಭವದೊಂದಿಗೆ ಬೆರೆಸಿ ಕಾವ್ಯರೂಪಕ್ಕಿಳಿಸಿದಾಗ ಗಟ್ಟಿ ಸಾಹಿತ್ಯ ಸೃಷ್ಠಿಯಾಗುತ್ತದೆ. ಇದಕ್ಕೆ ಪ್ರೇರಣೆ ನೀಡುವ ಕಾರ್ಯ ಪರಿಷತ್ತು ಮಾಡುತ್ತಿದೆ. ಕವಿ, ಕಾವ್ಯ, ಬದುಕು ಮತ್ತು ಸಮಾಜ ಇವು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಕಾವ್ಯ ಕವಿಯ ಬದುಕಿನ ಅನುಭವಗಳ ಪ್ರತಿಬಿಂಬವಾಗಿದ್ದರೆ, ಅದು ಸಮಾಜದ ಕನ್ನಡಿಯೂ ಹೌದು. ಇಂದು ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯನ್ನಾಗಿ ರೂಪಿಸಿಕೊಂಡು ಅನೇಕ ಹೊಸ ಬರಹಗಾರರು ಕಾವ್ಯ ಕೃಷಿಯಲ್ಲಿ ತೊಡಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಈವರೆಗೆ ಆಗದಿರುವ ಅನೇಕ ಪ್ರಥಮ ಸಮ್ಮೇಳನ ಏರ್ಪಡಿಸಿ ಯಶಸ್ವಿಗೊಳಿಸಲಾಗಿದೆ. ಆ ಮೂಲಕ ಈ ನೆಲದ ಪರಂಪರೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವ ಕಾರ್ಯ ಮಾಡುತ್ತಿದೆ ಎಂದು ವಿವರಣೆ ನೀಡಿದ್ದಾರೆ.
ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಆಡಂಬರ, ಮೆರವಣಿಗೆ ನಡೆಸದಿರಲು ನಿರ್ಧರಿಸಲಾಗಿದೆ. ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿ ರಚನೆ, ಜಿಲ್ಲೆಯ ಹಿರಿಯ ಮತ್ತು ಅನುಭವಿ ಕವಿಯೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಶ್ರೀ ಆಯ್ಕೆ ಮಾಡಲಾಗುವುದು ಎಂದರು.
ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ, ಬಾಬುರಾವ ಪಾಟೀಲ, ಜಯಶ್ರೀ ಜಮಾದಾರ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಧರ್ಮರಾಜ ಜವಳಿ, ರವಿಕುಮಾರ ಶಹಾಪೂರಕರ್, ಪ್ರಭುಲಿಂಗ ಮೂಲಗೆ, ಡಾ.ರೆಹಮಾನ್ ಪಟೇಲ್, ಹಣಮಂತರಾವ ಪೆಂಚನಪಳ್ಳಿ, ರಮೇಶ ಬಡಿಗೇರ, ಶಿವಲೀಲಾ ಕಲಗುರ್ಕಿ, ಸುರೇಶ ದೇಶಪಾಂಡೆ ಇತರರಿದ್ದರು.
"
ಪ್ರಸ್ತುತ ಸಮಾಜದಲ್ಲಿನ ಪ್ರಚಲಿತ ವಿಷಯಗಳ ಮೇಲೆ ಕಾವ್ಯ ಕಟ್ಟಿಕೊಳ್ಳಬೇಕಾಗಿದೆ. ಹೀಗಾಗಿ ಇಂತಹ ಕವಿ ಸಮ್ಮೇಳನ ಆಯೋಜಿಸುವ ಮೂಲಕ ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ಉಳಿಸುವಲ್ಲಿ ಸಾಹಿತ್ಯಾಸಕ್ತರು, ನವ ಕವಿ ಹೃದಯಗಳು ಇನ್ನೂ ಕಾರ್ಯ ಮಾಡಬೇಕಾಗಿದೆ.
— ವಿಜಯಕುಮಾರ ಪಾಟೀಲ್, ಅಧ್ಯಕ್ಷ, ಕಸಾಪ ಕಲಬುರಗಿ.