ರಾಯಚೂರು ಉತ್ಸವಕ್ಕೆ ಮೊದಲ ದಿನವೇ ನಿರೀಕ್ಷೆ ಮೀರಿ ಜನರು ಆಗಮಿಸಿದ್ದರು. 
ರಾಜ್ಯ

ಜಿಲ್ಲಾ ಉತ್ಸವ, ವಿದ್ಯುತ್ ದೀಪಾಲಂಕಾರದಲ್ಲಿ ಮಿಂಚಿದ ರಾಯಚೂರು ನಗರ

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ ಮೇಳಗಳ ಆಕರ್ಷಣೆ
  • ತಟ್ಟಿದ ಟ್ರಾಫಿಕ್ ಸಮಸ್ಯೆ
ರಾಯಚೂರು: ಎಡೆದೊರೆ ನಾಡು ರಾಯಚೂರಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಜಿಲ್ಲಾ ಉತ್ಸವದ ಮೊದಲ ದಿನವೇ ನಿರೀಕ್ಷೆ ಮೀರಿ ಜನರು ಆಗಮಿಸಿದ್ದಾರೆ.
ಸಾಂಸ್ಕೃತಿಕ ತಂಡಗಳು ವಿಭಿನ್ನ ವೇಷ-ಭೂಷಣಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಿದರೆ, ಜಾನಪದ ಕಲಾ ತಂಡಗಳು ತಮ್ಮ ಕಲೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸಿದವು. ನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವದ ಕಳೆ ಹೆಚ್ಚಿಸಲು ಮಾಡಲಾದ ವಿದ್ಯುದ್ದೀಪಗಳ ಅಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ.
ಉತ್ಸವದ ಅಂಗವಾಗಿ ಬೈಕ್ ರ‌್ಯಾಲಿ, ಶಿಲ್ಪಕಲೆ ಹಾಗೂ ಚಿತ್ರಕಲೆಗಳ ಪ್ರದರ್ಶನ, ರಾಯಚೂರು ಬೈಸ್ಕೈ, ಮತ್ಸ್ಯ ಮೇಳ ಹಾಗೂ ಫಲಪುಷ್ಪ ಮೇಳ ಸೇರಿದಂತೆ ನಾನಾ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಟಿಸಿವೆ.
ಸೂರ್ಯಸ್ತವಾಗುತ್ತಿದ್ದಂತೆ ಉತ್ಸವಕ್ಕೆ ಜನಸಾಗರವೇ ಹರಿದುಬಂದಿದ್ದು, ನಗರದ ಪ್ರತಿ ರಸ್ತೆ ಜನರಿಂದ ತುಂಬಿ ತುಳುಕುತ್ತಿದೆ. ಜಿಲ್ಲೆ ಸೇರಿದಂತೆ ನಾನಾ ಭಾಗಗಳಿಂದ ಪಾಲಕರು ಮಕ್ಕಳೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೃಷಿ ವಿಶ್ವವಿದ್ಯಾಲಯದ ವೇದಿಕೆ ಬಳಿಯ ಪ್ರದರ್ಶನ ಮಳಿಗೆಗಳು, ಆಹಾರ ಮೇಳ, ಮಹಿಳಾ ಸಮಾಜದ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದವು.
ವೇದಿಕೆಗೆ ಖ್ಯಾತ ಗಾಯಕರು ಆಗಮಿಸುತ್ತಿದ್ದಂತೆ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ವಿವಿಧ ತಾಲೂಕುಗಳಿಂದ ಬಂದ ಶಾಲಾ ಮಕ್ಕಳು ಉತ್ಸವವನ್ನು ಕಣ್ತುಂಬಿಕೊಂಡರು.

ರಾರಾಜಿಸಿದ ಬ್ಯಾನರ್‌ಗಳು

ಉತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಬ್ಯಾನರ್‌ಗಳ ಭರಾಟೆ ಜೋರಾಗಿತ್ತು. ಅಸ್ಕಿಹಾಳ ರಸ್ತೆ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್, ಸತೀಶ ಜಾರಕಿಹೊಳಿ, ಎನ್.ಎಸ್.ಬೋಸರಾಜು ಸೇರಿದಂತೆ ಗಣ್ಯರ ಭಾವಚಿತ್ರಗಳಿರುವ ಬ್ಯಾನರ್‌ಗಳ ಮೂಲಕ ಅಭಿಮಾನಿಗಳು ಸ್ವಾಗತ ಕೋರಿದರು. ಪ್ರತಿ ಮುಖ್ಯ ದ್ವಾರದ ಬಳಿ ಹಾಕಿರುವ ಸ್ವಾಗತ ಕಮಾನುಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಸಂಚಾರ ದಟ್ಟಣೆ-ಪಾರ್ಕಿಂಗ್ ವ್ಯವಸ್ಥೆ

ಜನರು ನಿರೀಕ್ಷೆಗೆ ಮೀರಿ ಆಗಮಿಸಿದ್ದರಿಂದ ನಗರದ ಕೆಲವೆಡೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿತು. ರಾಯಚೂರು ಉಪ ವಿಭಾಗದ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ಐದು ವೇದಿಕೆಗಳಿಗೆ ತೆರಳಲು ವಿಶೇಷ ಮಾರ್ಗಗಳನ್ನು ಸಿದ್ಧಪಡಿಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯಕ್ಕೆ ಬರುವ ಸಾರ್ವಜನಿಕರಿಗಾಗಿ 8 ಎಕರೆ ವಿಶಾಲ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಸಿಂಧನೂರು ಹಾಗೂ ಲಿಂಗಸೂರು ಮಾರ್ಗದಿಂದ ಬರುವ ವಾಹನಗಳಿಗೆ ಗ್ರೀನ್ ಪ್ಯಾಲೆಸ್ ಹತ್ತಿರದ ಖಾಲಿ ಜಾಗಗಳಲ್ಲಿ ಸುಮಾರು 2 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಐಪಿ, ಮಾಧ್ಯಮ ಹಾಗೂ ಅಧಿಕಾರಿಗಳ ವಾಹನಗಳಿಗೆ ಕೃಷಿ ವಿಶ್ವವಿದ್ಯಾಲಯದ ಗೆಸ್ಟ್ಹೌಸ್ ರಸ್ತೆಯ ಸಮೀಪ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಟ್ರಾಫಿಕ್ ನಿಯಂತ್ರಣಕ್ಕಾಗಿ ಬಜಾರ್ ಸರ್ಕಲ್, ಮೈಕ್ರೋ ಟವರ್ ಬೈಪಾಸ್, ಗದ್ವಾಲ್ ರಸ್ತೆ, ಎಂಆರ್‌ಎಸ್ ಬೈಪಾಸ್ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿದ್ದರೂ ಟ್ರಾಫಿಕ್ ಸಮಸ್ಯೆ ಎದುರಾಯಿತು.

ರಾಯಚೂರು ಉತ್ಸವಕ್ಕೆ ಮೊದಲ ದಿನವೇ ನಿರೀಕ್ಷೆ ಮೀರಿ ಜನರು ಆಗಮಿಸಿದ್ದರು. ನಮ್ಮ ಇಲಾಖೆಯಿಂದ 500ಕ್ಕೂ ಅಧಿಕ ಸಿಬ್ಬಂದಿಯಿಂದ ಬಂದೋಬಸ್ತ್ಗೆ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ಸಮಸ್ಯೆ ಆಗದಂತೆ ಅನೇಕ ಕಡೆ ಮಾರ್ಗ ಬದಲಾವಣೆ ಮಾಡಲಾಗಿದೆ.