Distribution of title deeds to Tanda residents 
ರಾಜ್ಯ

ತಾಂಡಾ ವಾಸಿಗಳಿಗೆ ಹಕ್ಕುಪತ್ರ ವಿತರಣೆ

ಮಧುಗಿರಿ : ಬಹುದಿನಗಳಿಂದ ದಾಖಲೆಗಳಿಲ್ಲದೆ ಇರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿಗಳು, ಅಲೆಮಾರಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ ಅಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ಕೆ.ಎನ್​.ರಾಜಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿರುವ ಸುಮಾರು 2,448 ಫಲಾನುಭವಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಇಂತಹ ಐತಿಹಾಸಿಕ ತೀಮಾರ್ನವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ ಎಂದರು.
ತಾಲೂಕಿನ ಕೆಲವೆಡೆ ದಾಖಲೆಗಳಲ್ಲಿ ತೊಡಕುಗಳು ಇರುವ ಕಡೆ ಸರಿಪಡಿಸಲಾಗುವುದು, ನಂತರ ಪೋಡಿ ಮಾಡುವುದು ಸೇರಿದಂತೆ ಕಾನೂನುಬದ್ಧವಾಗಿ ಅವರಿಗೂ ಸಹ ಹಕ್ಕುಪತ್ರ ವಿತರಿಸಲಾಗುತ್ತದೆ. ಈ ಹಿಂದೆ ೌತಿ ಖಾತೆಗೆ ಅರ್ಜಿ ಸಲ್ಲಿಸಿ ಕಾಯಬೇಕಾಗಿತ್ತು. ಈಗ ಅಂತಹ ಪ್ರಮೇಯವಿಲ್ಲ. ಫೌತಿಖಾತೆ ಆಂದೋಲನದ ಮೂಲಕ ಅಧಿಕಾರಿಗಳೇ ಫಲಾನುಭವಿಗಳನ್ನು ಗುರುತಿಸಿ ಮಾಡಿಕೊಡುತ್ತಾರೆ. ಇದಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಹರಿಗೆ, ರೈತರಿಗೆ ದಾಖಲೆಗಳಲ್ಲಿ ಯಾವುದೇ ಮೋಸವಾಗದಂತೆ ನಿಖರವಾಗಿ ಸೌಲಭ್ಯ ತಲುಪಬೇಕು ಎಂದರು.