Distribution of 1 lakh 'Pauti Khata' documents and 25 title deeds. 
ರಾಜ್ಯ

1 ಲಕ್ಷ ಪೌತಿ ಖಾತೆ, 25 ಹಕ್ಕುಪತ್ರ ವಿತರಣೆ

ಕುಣಿಗಲ್​: ಕಂದಾಯ ಇಲಾಖೆಯು ಜಿಲ್ಲೆಯಲ್ಲಿ ಮೇ ಅಂತ್ಯದವರಿಗೆ ರೈತರಿಗೆ ಒಂದು ಲಕ್ಷ ಪೌತಿ ಖಾತೆ ಹಾಗೂ ಇಪ್ಪತೈದು ಸಾವಿರ ಹಕ್ಕುಪತ್ರಗಳನ್ನು ವಿತರಿಸಿ ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ ಆಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತಿಳಿಸಿದರು.
ತಾಲೂಕು ಆಡಳಿತಸೌಧ ಮುಂಭಾಗದಲ್ಲಿ ಶಾಸಕ ಡಾ.ಎಚ್​.ಡಿ.ರಂಗನಾಥ್​ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಗಳು ರೈತರ ಅರ್ಜಿಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ತುರ್ತು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ಲಕ್ಷ ಪೌತಿ ಖಾತೆ ವಿತರಿಸಿದ್ದು, 28 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
1993ರಿಂದ ಯಾವುದೇ ವಿಧವಾದ ಹಕ್ಕುಪತ್ರಗಳು ಅಲೆಮಾರಿ ಜನಾಂಗಕ್ಕೆ ನೀಡಿರುವುದಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಜಿಲ್ಲಾಡಳಿತ ಕಂದಾಯ ಮಂತ್ರಿ ಡಾ.ಜಿ ಪರಮೇಶ್ವರ ಅವರ ಮಾರ್ಗದರ್ಶನದಂತೆ ತ್ವರಿತವಾಗಿ ರೈತರ ಮನೆ ಬಾಗಿಲಿಗೆ ಖಾತೆ ಪಹಣಿ ತಲುಪಿಸಲು ಕ್ರಮ ಕೈಗೊಂಡಿದ್ದು, ಉಳಿದಿರುವ ಮೂರು ಲಕ್ಷ ಫಲಾನುಭವಿಗಳ ಮನೆಗೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ. ಉಪವಿಭಾಗಾಧಿಕಾರಿಗಳಿಗೆ ಈ ಬಗ್ಗೆ ಗಮನಹರಿಸಲು ಸೂಚಿಸಿದ್ದು, ಸೋಮವಾರ ಒಂದೇ ದಿನ 600 ಅರ್ಜಿಗಳನು ಇತ್ಯರ್ಥಪಡಿಸಲಾಗಿದೆ. ಇನ್ನು ಮುಂದೆ ಪ್ರತಿದಿನ ಸಾವಿರ ಅರ್ಜಿಗಳನ್ನ ಅಧಿಕಾರಿಗಳು ಇತ್ಯರ್ಥ ಮಾಡುವಂತೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಡಾ.ಎಚ್​.ಡಿ.ರಂಗನಾಥ್​ ಮಾತನಾಡಿ, ತಾಲೂಕಿನಲ್ಲಿ ರೈತರ ಜಮೀನುಗಳ ಒನ್​ ಟು ಫೈವ್​ ಖಾತೆಗಳು ಬಾಕಿ ಇದ್ದು. ಸರ್ವೇ ನಕ್ಷೆ ತಯಾರಿಸಲು ಸರ್ವೇ ಇಲಾಖೆಯಲ್ಲಿ ಈಗಾಗಲೇ ಗುತ್ತಿಗೆ ಸರ್ವೇಯರ್​ಗಳು ಅರ್ನಿದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಸರ್ವೇಯರ್​ಗಳ ಕೊರತೆ ಉಂಟಾಗಿದೆ. ಅಧಿಕಾರಿಗಳು ಶೀಘ್ರವಾಗಿ ಸರ್ವೇಯರ್​ಗಳ ವಿಶೇಷ ತಂಡ ರಚಿಸಿ ರೈತರ ಸಮಸ್ಯೆಗಳು ಶೀಘ್ರವೇ ಬಗೆಹರಿಸಬೇಕಾಗಿ ಎಚ್ಚರಿಸಿದರು.
ಕೆರೆಗಳ ಒತ್ತುವರಿಗಳನ್ನು ಶೀಘ್ರವೇ ಸರ್ವೇ ನಡೆಸಿ ಒತ್ತುವರಿದಾರದ ವಿರುದ್ಧ ನಿರ್ದಾಕ್ಷಿಣವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ ಅವರು, ಜಮೀನುಗಳ ಚೆಕ್​ ಬಂದಿ ಸೇರಿ ಅವರ ವಂಶಸ್ಥರ ಖಾತೆಗಳನ್ನು ಸರಳಿಕರಿಸಿ ರೈತರಿಗೆ ಖಾತೆ ಪಹಣಿ ಮಾಡಲು ಗಮನ ಹರಿಸಬೇಕು ಎಂದರು.
ಈ ಬಗ್ಗೆ ರೈತರು ಒಬ್ಬರು ಪೋಡಿ ಮಾಡಲು 5 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದ ಜಮ್​ ಜಮ್​ , ಸರ್ವೇ ಇಲಾಖೆಯ ಅಸ್ಟೆಂಟ್​ ಡೈರೆಕ್ಟರ್​ ಭಾವನಾ, ತಹಸೀಲ್ದಾರ್​ ಕರಿಯ ನಾಯಕ್​, ತಾಲೂಕು ಕಾರ್ಯನಿರ್ವಹಣಾಧಿಕಾರಿ ವಸಂತ್​ ಕುಮಾರ್​ ಇದ್ದರು.