ಬೆರಳಚ್ಚು ನೀಡಿದ ತಕ್ಷಣವೇ ನ್ಯಾಯಬೆಲೆ ಅಂಗಡಿಗಳು ಕಾರ್ಡ್‌ದಾರರಿಗೆ ಪಡಿತರ ವಿತರಿಸಿ
ಬೆಂಗಳೂರು: ಆಹಾರ ಪದಾರ್ಥ ವಿತರಣೆ ವೇಳೆ ನಡೆಯುತ್ತಿರುವ ಅಕ್ರಮ ತಡೆಗೆ ಮುಂದಾಗಿರುವ ಆಹಾರ ಇಲಾಖೆ, ಬೆರಳಚ್ಚು (ಬಯೋಮೆಟ್ರಿಕ್) ನೀಡಿದ ತಕ್ಷಣವೇ ನ್ಯಾಯಬೆಲೆ ಅಂಗಡಿಗಳು ಕಾರ್ಡ್‌ದಾರರಿಗೆ ಪಡಿತರ ವಿತರಿಸಬೇಕೆಂದು ಆದೇಶ ಹೊರಡಿಸಿದೆ.
ಇಲ್ಲವಾದರೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದೆ.
ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು, ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಅಂಗಡಿ ತೆರೆಯುತ್ತಿವೆ. ಫಲಾನುಭವಿಗಳಿಂದ ಒಂದು ದಿನ ಬಯೋಮೆಟ್ರಿಕ್ ಪಡೆದು ಕೆಲವು ದಿನಗಳ ನಂತರ ಪಡಿತರ ಧಾನ್ಯ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಬೆರಳಚ್ಚು ನೀಡಿದ ಒಂದೆರಡು ದಿನಗಳ ನಂತರ ಪಡಿತರ ನೀಡುವುದು ನಿಯಮಬಾಹಿರವಾಗಿದೆ. ಹಾಗಾಗಿ, ಕಾರ್ಡ್‌ದಾರರು ಬಯೋಮೆಟ್ರಿಕ್ ನೀಡಿದ ತಕ್ಷಣವೇ ಅವರಿಗೆ ಪಡಿತರ ಧಾನ್ಯ ವಿತರಿಸಬೇಕು ಎಂದು ಇಲಾಖೆ ಹೇಳಿದೆ.
ಬಯೋ ಪಡೆದು ಪಡಿತರ ನೀಡದೆ ಕಾಯಿಸುವುದು ಅಥವಾ ದಿನಗಳ ನಂತರ ಧಾನ್ಯ ವಿತರಿಸುವುದು ಕಂಡುಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಂಟಿ,ಉಪ ನಿರ್ದೇಶಕರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಇದೇವೇಳೆ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.