Distressed over privatepart injury youth dies by suicide in Bengaluru 
ರಾಜ್ಯ

ಸ್ನೇಹಿತರೊಂದಿಗಿನ ಜಗಳದಲ್ಲಿ ಖಾಸಗಿ ಅಂಗಕ್ಕೆ ಗಾಯ!; ತಂದೆಯಾಗುವ ಸಾಮರ್ಥ್ಯ ಕಳೆದುಕೊಂಡಿದ್ದಕ್ಕೆ ನೊಂದ ಯುವಕ?, ಆತ್ಮಹತ್ಯೆ..Bengaluru

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ತ್ರಿಪುರ ಮೂಲದ 27 ವರ್ಷದ ಯುವಕ ಆತ್ಮಹತ್ಯೆ
  • ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಗುಪ್ತಾಂಗಕ್ಕೆ ಗಂಭೀರ ಗಾಯ
  • ತಂದೆಯಾಗುವ ಸಾಮರ್ಥ್ಯ ಕಳೆದುಕೊಂಡಿದ್ದಕ್ಕೆ ನೊಂದು ಆತ್ಮಹತ್ಯೆ ಕುಟುಂಬಸ್ಥರ ಆರೋಪ
ಬೆಂಗಳೂರು: ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಖಾಸಗಿ ಅಂಗಾಗಕ್ಕೆ ಗಂಭೀರ ಗಾಯವಾದ ಪರಿಣಾಮ, ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಈಜಿಪುರದಲ್ಲಿ ಬೆಳಕಿಗೆ ಬಂದಿದೆ.
ಮೃತನನ್ನು ತ್ರಿಪುರ ಮೂಲದ 27 ವರ್ಷದ ಯುವಕ ತಪನ್ ನಾಥ್ ಎಂದು ಗುರುತಿಸಲಾಗಿದೆ. ಕೋರಮಂಗಲದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸಕ್ಕೆ ಹಾಜರಾಗಿರಲಿಲ್ಲ. 11:30 ಸುಮಾರಿಗೆ ಆತನ ರೂಮ್​ಮೇಟ್​ ಕೊಠಡಿಗೆ ವಾಪಸ್​ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಪೋಷಕರು ಹೇಳಿದ್ದೇನು?

ಮೂರ್ನಾಲ್ಕು ತಿಂಗಳ ಹಿಂದೆ ತಪನ್​ ಮತ್ತು ಸ್ನೇಹಿತರ ಜೊತೆಗೆ ಜಗಳವಾಗಿತ್ತು. ಇದರಿಂದ ಆತನ ಖಾಸಗಿ ಅಂಗಾಗಕ್ಕೆ ಗಂಭೀರ ಗಾಯವಾಗಿತ್ತು. ನಮಗೂ ಈ ವಿಚಾರದ ಬಗ್ಗೆ ಏನೂ ತಿಳಿಸಿರಲಿಲ್ಲ. ಒಬ್ಬನೇ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದ. ಅದಕ್ಕೆ ಚಿಕಿತ್ಸೆ ನೀಡಿದ್ದರೂ, ಅಲ್ಲದೆ ಮುಂದೆ ಆತನು ತಂದೆಯಾಗುವ ಸಾಮರ್ಥ್ಯ ಕಳೆದುಕೊಂಡಿದ್ದಾನೆ ಎಂದು ತಿಳಿಸಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಪನ್​ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸರು ಏನಂದ್ರು?

ಸದ್ಯ ವಿವೇಕನಗರ ಪೊಲೀಸರು ಮೃತನ ಕುಟುಂಬಸ್ಥರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆತನ ಪೋಷಕರು ಹಾಗೂ ಸ್ನೇಹಿತರು ಸಹ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾರೆ. ಆದರೆ, ಮೆಡಿಕಲ್​​​ ಸರ್ಟಿಫಿಕೇಟ್​ ವರದಿ ಇಲ್ಲದೆ ಹಾಗೂ ಆತ ಯಾರ ಬಳಿ ಚಿಕಿತ್ಸೆ ಪಡೆದುಕೊಂಡನೋ ಆ ವೈದ್ಯರ ಬಳಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳದೆ ಇದೇ ನಿಖರ ಕಾರಣ ಎಂದು ಹೇಳೋಕೆ ಸಾಧ್ಯವಿಲ್ಲ. ಹೀಗಾಗಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ, (ಏಜೆನ್ಸೀಸ್).