Dispose of pending applications. 
ರಾಜ್ಯ

ಬಾಕಿ ಇರುವ ಅರ್ಜಿ ವಿಲೇ ಮಾಡಿ

ಕೊರಟಗೆರೆ: ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಪದ್ಧತಿ ಕುರಿತು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಿಂದ ಬಂದ ಅರ್ಜಿಗಳಲ್ಲಿ ಹೆಚ್ಚಿನವು ಕಂದಾಯ ಇಲಾಖೆ, ಸರ್ವೇ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಸ್ಕಾಂ ಹಾಗೂ ಪುರಸಭೆ ವ್ಯಾಪ್ತಿಯ ರಾಜಕಾಲುವೆ ಒತ್ತುವರಿ ಸಮಸ್ಯೆಗಳಿಗೆ ಸಂಬಂಧಿಸಿದವು ಎಂದು ತಿಳಿಸಿದರು.
ಪೋಡಿ ಸಮಸ್ಯೆ, ದುರಸ್ತಿ ಹಾಗೂ ತತ್ಕಾಲ್​ ಪೋಡಿ ವಿಚಾರಗಳಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಡಿಸಿ, ಸರ್ವೇ ಇಲಾಖೆಯಲ್ಲಿ ಲೈಸೆನ್ಸ್​ ಸರ್ವೇಯರ್​ ಕೊರತೆಯಿಂದ ಜನಸಾಮಾನ್ಯರ ಕೆಲಸಗಳು ದೀರ್ಘಕಾಲದಿಂದ ಬಾಕಿ ಉಳಿದಿವೆ. ಸುಮಾರು ಎರಡು ವರ್ಷಗಳಿಂದ ಬಾಕಿ ಇರುವ ಅರ್ಜಿಗಳನ್ನು ಸರ್ಕಾರಿ ಸರ್ವೇಯರ್​ಗಳು ತಕ್ಷಣ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.
ಆರ್​ಆರ್​ಟಿ ವಿಭಾಗದಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಡಲೇ ಬಗೆಹರಿಸುವಂತೆ ತಹಸೀಲ್ದಾರ್​ಗೆ ಈಗಾಗಲೇ ಸೂಚನೆ ನೀಡಿತು. ತಾಲೂಕು ಮಟ್ಟದ ಪ್ರತಿಯೊಂದು ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿದರೆ ಸಾರ್ವಜನಿಕರಿಂದ ಇಷ್ಟು ಪ್ರಮಾಣದಲ್ಲಿ ಅರ್ಜಿಗಳು ಬರುವುದಿಲ್ಲ ಎಂದರು.
ಇಂದಿನ ಜನಸಂಪರ್ಕ ಸಭೆಯಲ್ಲಿ 120ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳನ್ನೆಲ್ಲ ಆನ್​ಲೈನ್​ ಮೂಲಕ ದಾಖಲಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದ ಅರ್ಜಿಗಳಲ್ಲಿ ತುರ್ತು ಸ್ವರೂಪದ 20ಕ್ಕೂ ಹೆಚ್ಚು ಅರ್ಜಿಗಳನ್ನು ನಾನು ಖುದ್ದಾಗಿ ಪರಿಶೀಲಿಸಿ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ರೇಷನ್​ ಕಾರ್ಡ್​ನಲ್ಲಿ ಹೆಸರು ಕೈಬಿಟ್ಟಿರುವುದಾಗಿ ಹಲವು ಅರ್ಜಿಗಳು ಬಂದಿದ್ದು, ಆಹಾರ ಇಲಾಖೆ ವಿಶೇಷ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು. ವಿವಿಧ ಇಲಾಖೆಗಳ ಎಲ್ಲ ಅರ್ಜಿಗಳನ್ನು ವಾರದೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.
ಕೃಷಿ ಇಲಾಖೆ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಾಂಜಿನಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.