State Information Commission
ಬೆಂಗಳೂರು: ರಾಜ್ಯ ಮಾಹಿತಿ ಆಯೋಗವು ಕಳೆದ ಒಂದು ವರ್ಷದ ಅವಧಿಯಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿಗಳ ವಿಲೇವಾರಿ ಸೇರಿ ಆಯೋಗಕ್ಕೆ ಹಲವು ಆಯಾಮಗಳಲ್ಲಿ ಪ್ರಗತಿಯ ವೇಗ ದೊರಕಿದೆ ಎಂದು ತಿಳಿಸಿದ್ದು, ಈ ಕುರಿತಂತೆ ಹಲವು ವಿಚಾರಗಳನ್ನು ಜನರೊಂದಿಗೆ ಹಂಚಿಕೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆಯೋಗ, ಕಳೆದ ಒಂದು ವರ್ಷದ ಅವಧಿಯಲ್ಲಿ ಆಯೋಗದ ಪ್ರಗತಿಯ ನೋಟವನ್ನು ರಾಜ್ಯದ ಜನರ ಮುಂದೆ ಬಹಿರಂಗಪಡಿಸಿದೆ. ಕರ್ನಾಟಕ ಮಾಹಿತಿ ಆಯೋಗ ಇಡೀ ದೇಶದಲ್ಲಿಯೇ ಅತ್ಯಂತ ವೇಗವಾಗಿ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ, ಶಿಸ್ತುಕ್ರಮಗಳ ಶಿಫಾರಸುಗಳ ಜತೆಗೆ 36,474 ಮೇಲ್ಮನವಿಗಳನ್ನು ವಿಲೇವಾರಿ ಮಾಡಿದ್ದಾಗಿ ತಿಳಿಸಿದೆ.
2023ರಿಂದ 2025ರ ಫೆಬ್ರವರಿ ತನಕ ಕೇವಲ ಮೂರು ಜನ ಮಾತ್ರ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ಅರ್ಜಿಗಳ ವಿಲೇವಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಆದರೆ, ಒಂದು ವರ್ಷದ ಅವಧಿಯಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿಗಳ ವಿಲೇವಾರಿಗೆ ವೇಗ ಸಿಕ್ಕಿದೆ. ಫೆ.2025ರಲ್ಲಿ ವಿಚಾರಣೆಗೆ ಬಾಕಿಯಿದ್ದ ಹಾಗೂ ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳು ಸೇರಿ ವಿಚಾರಣೆಗೆ 69,471 ಅರ್ಜಿಗಳು ಬಾಕಿ ಇದ್ದವು. ಒಂದು ವರ್ಷದ ಅವಧಿಯಲ್ಲಿ 36,474 ಅರ್ಜಿಗಳನ್ನು ಆಯುಕ್ತರು ವಿಲೇವಾರಿ ಮಾಡಿದೆ. ಮೇಲ್ಮನವಿದಾರರಿಗೆ ಸೂಕ್ತ ಮಾಹಿತಿ ಅಥವಾ ಹಿಂಬರಹವನ್ನು ಕೂಡಿಸುವಲ್ಲಿ ಯಶಸ್ವಿಯಾಗಿದೆ. 32,997 ದ್ವಿತೀಯ ಮೇಲ್ಮನವಿ ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಇಲಾಖೆ ತಿಳಿಸಿದೆ.
ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ
ಅರ್ಜಿಗಳ ಶೀಘ್ರ ವಿಲೇವಾರಿಗೆ ಕಾರಣವಾಗಿದ್ದು, ರಾಜ್ಯ ಮಾಹಿತಿ ಆಯುಕ್ತರು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ನಡೆಸಿದ ಮಾಹಿತಿ ಹಕ್ಕು ಅಧಿನಿಯಮ ಕುರಿತ ತರಬೇತಿ ಕಾರ್ಯಾಗಾರ. ಇಂತಹ ಕಾರ್ಯಾಗಾರಗಳು ಇದುವರೆಗೆ 23 ಜಿಲ್ಲೆಗಳಲ್ಲಿ ನಡೆದಿವೆ. ಅದರಿಂದ ಮಾಹಿತಿ ನೀಡುವ ಹಾಗೂ ಮಾಹಿತಿ ಆಯೋಗದ ವಿಚಾರಣೆಗೆ ಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಸಂಖ್ಯೆ ವೃದ್ಧಿಸಿದೆ. ಮಾಹಿತಿ ನೀಡುವ ಪ್ರಮಾಣ ಶೇ.85 ರಿಂದ 90ರಷ್ಟು ಇದೆ. ಇಂತಹ ಕಾರ್ಯಾಗಾರಗಳನ್ನು ಆಯೋಗ ನಿರಂತರವಾಗಿ ನಡೆಸುವ ಉದ್ದೇಶವನ್ನು ಹೊಂದಿದೆ.
ರಾಷ್ಟ್ರೀಯ ಸಮಾವೇಶ
ಮಾಹಿತಿ ಹಕ್ಕು ಅಧಿನಿಯಮ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುವ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಲುವಾಗಿ ರಾಷ್ಟ್ರೀಯ ಸಮಾವೇಶ ನಡೆಸುವ ಉದ್ದೇಶ ಆಯೋಗ ಹೊಂದಿದೆ. ಈ ಬಗ್ಗೆ ಆಯೋಗ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡಲಿದೆ. ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೆ ತಂದ ಹಾಗೂ ಆಯೋಗಕ್ಕೆ ಹೆಚ್ಚಿನ ಬಲ ತುಂಬಿದ್ದು ಕರ್ನಾಟಕ ಸರ್ಕಾರ ಎಂಬುದು ಇಲ್ಲಿ ಗಮನಾರ್ಹ.
ಸಾರ್ವಜನಿಕ ಪ್ರಾಧಿಕಾರ
ಇದುವರೆಗೆ ಮಾಹಿತಿ ನೀಡದಿದ್ದ ಕರ್ನಾಟಕ ಹಾಲು ಮಹಾಮಂಡಲ ಹಾಗೂ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಫ್ ಅಥಾರಿಟಿಗಳನ್ನು ಸಾರ್ವಜನಿಕ ಪ್ರಾಧಿಕಾರಗಳೆಂದು ಘೋಷಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಕೊಡಿಸುವಂತೆ ಆಯೋಗ ಮಾಡಿದೆ.