- ಕೇಂದ್ರ ಪುರಸ್ಕೃತ ಯೋಜನೆಗಳು ಸಮರ್ಪಕ ಅನುಷ್ಠಾನವಾಗಲಿ
- ರಾಧಾಕೃಷ್ಣ ದೊಡ್ಡಮನಿ
ಕಲಬುರಗಿ : ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿಯೇ ಸಮಪರ್ಕವಾಗಿ ಅನುಷ್ಠಾನವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಂಸದ ರಾದಾಕೃಷ್ಣ ದೊಡ್ಡಮನಿ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು. ಜಿಲ್ಲೆಗೆ ಸಂಬಂಧಿಸಿದ ಏನೇ ಪ್ರಸ್ತಾವನೆಗಳು ಕೇಂದ್ರದಲ್ಲಿ ಬಾಕಿ ಇದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಸಂಬಙಧಪಟ್ಟ ಸಚಿವರು-ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತ್ವರಿತಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಎಂ.ಪಿ.ಲ್ಯಾಡ್ ಹಣ ಖರ್ಚು ಮಾಡಿ:
ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಜಿಲ್ಲೆಯ ಶಾಲೆಗಳ ಸುಧಾರಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಈಗಾಗಲೆ ಸೂಚನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಸೂಚನೆ ನೀಡಿದರು.
ಬಿ.ಎಸ್.ಎನ್.ಎಲ್. ಇಲಾಖೆ ಚರ್ಚೆ ವೇಳೆಯಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಜಿಲ್ಲೆಯ 203 ಪ್ರದೇಶ ಗುರುತಿಸಿ ಇಲ್ಲಿ 4ಜಿ ಸ್ಯಾಚುರೇಷನ್‌ಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿ 46ಕ್ಕೆ ಅನುಮತಿ ದೊರೆತಿದೆ. 46 ಕಡೆ ರಾಜ್ಯ ಸರ್ಕಾರ ಉಚಿತ ಅಥವಾ ಲೀಸ್ ಮೇಲೆ ಜಮೀನು ನೀಡಿದಲಿ ಟವರ್ ನಿರ್ಮಿಸಲಾಗುವುದು ಎಂದು ಬಿ.ಎಸ್.ಎನ್.ಎಲ್ ಅಧಿಕಾರಿಗಳು ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಪೂಜಿ ಸೇವಾ ಕೇಂದ್ರದ ಮೂಲಕ ಹಳ್ಳೀ ಜನರಿಗೆ ಸಾರ್ವಜನಿಕ ಸೇವೆ ನೀಡಲಾಗುತ್ತಿದೆ. ಆದರೆ ಇಂಟರ್ನೆಟ್ ಸಮಸ್ಯೆ ದೊಡ್ಡದಾಗಿ ನಮ್ಮನ್ನು ಕಾಡುತ್ತಿದೆ. ಅಂತರ್ಜಾಲ ಸಮಸ್ಯೆ ತೊಡಕಾಗದಂತೆ ಎಚ್ಚರ ವಹಿಸಬೇಕು. ಇನ್ನು ಉದ್ದೇಶಿತ 203 ಕಡೆ ಟವರ್ ಸ್ಥಾಪನೆಯ ಪ್ರಸ್ತಾವನೆಗಳ ಪಟ್ಟಿ ಕೊಟ್ಟಿದಲ್ಲಿ ಜಿಲ್ಲಾಡಳಿತದಿಂದ ಭೂಮಿ ಮಂಜೂರು ಮಾಡಿಸಲಾಗುವುದು. ಇನ್ನು ಜಿಲ್ಲೆಗೆ ಕೇಂದ್ರ ಸರ್ಕಾರದ ಯಾವುದೇ ಯೋಜನೆಗೆ ಏನೇ ತೊಡಕಾದಲ್ಲಿ ತಮ್ಮನ್ನು ಅಥವಾ ಕ್ಷೇತ್ರದ ಶಾಸಕರ ಗಮನಕ್ಕೆ ತಂದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ ಪಾಟೀಲ ಕಿವಿಮಾತು ಹೇಳಿದರು.