ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಬಸವಧರ್ಮ ಪ್ರವಚನಕ್ಕೆ ಜೆಸ್ಕಾಂ ಎಇಇ ರಾಹುಲ್ ಇಜಾರೆ ಗುರುವಾರ ಚಾಲನೆ ನೀಡಿದರು. ಜಗದ್ಗುರು ಡಾ.ಗಂಗಾದೇವಿ ಮಾತಾಜಿ, ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ, ಡಾ.ಜಿ.ಎಸ್.ಭುರಳೆ, ಪುಷ್ಪಾವತಿ ಮಾಮಾ ಇತರರಿದ್ದರು.
- ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಅಭಿಮತ
- ಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ
ಬಸವಕಲ್ಯಾಣ: ಸಾಮಾನ್ಯ ಉಪನ್ಯಾಸಕ್ಕಿಂತ ಪರಿಣಾಮಕಾರಿಯಾಗಿರುವ ಪ್ರವಚನಕ್ಕೆ ಸಮಾಜದಲ್ಲಿ ಪರಿವರ್ತನೆ ತರುವ ಗುಣವಿದೆ ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.
ಶ್ರಾವಣ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ಸಹಯೋಗದಡಿ ಗುರುವಾರ ಸಂಜೆ ತಿಂಗಳ ಬಸವಧರ್ಮ ಪ್ರವಚನದ ಉದ್ಘಾಟನಾ ಸಮಾರಂಭಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವಣ್ಣನವರ ಚಿಂತನೆಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪೂಜ್ಯ ಮಾತೆ ಮಹಾದೇವಿ ಶ್ರಮ ದೊಡ್ಡದು. ಪೂಜ್ಯ ಗಂಗಾದೇವಿ ಮಾತಾಜಿ ಪ್ರವಚನ ಜಗತ್ತು ಬೆಳಗುವ ಬೆಳಕಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಡಾ.ಗಂಗಾದೇವಿ ಮಾತಾಜಿ ಮಾತನಾಡಿ, ಪ್ರವಚನ ಎಂಬುದು ಜ್ಞಾನ ಪ್ರಸಾದ ಇದ್ದಂತೆ. ಶರಣರು, ಸಂತರು, ಯೋಗಿಗಳ ಚಿಂತನೆ, ಆಲೋಚನೆಗಳನ್ನು ಕೇಳಿಸಿಕೊಂಡು ಸ್ವಾನುಭವ ಪಡೆಯುವುದಾಗಿದೆ ಎಂದರು.
ಖೇಳಗಿ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವ ತತ್ವದ ಅರಿವು ಬದುಕು ಹಸನು ಮಾಡುತ್ತದೆ ಎಂದು ನುಡಿದರು.
ಸಮಾರಂಭ ಉದ್ಘಾಟಿಸಿದ ಜೆಸ್ಕಾಂ ಎಇಇ ರಾಹುಲ್ ಇಜಾರೆ ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನೀಡಿದ ಇಂಥ ಪವಿತ್ರ ನೆಲದಲ್ಲಿ ನನಗೆ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ. ಬಸವ ಫಿಲಾಸಫಿ ಕುರಿತು ಚಿಂತನೆ, ಚೆರ್ಚೆ ನಿರಂತರ ನಡೆಯಬೇಕು. ಶಾಲಾ-ಕಾಲೇಜು, ಧಾರ್ಮಿಕ ಸ್ಥಳಗಳಲ್ಲಿ ಬಸವ ಚಿಂತನೆ ನಿತ್ಯ ನಡೆಯಬೇಕು ಎಂದು ಆಶಿಸಿದರು.
ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ಬಿಡಿಪಿಸಿ ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿಗಳಾದ ಬಸವರಾಜ ಬಾಲಕಿಲೆ, ಸುನಿಲ್ ರಾಯವಾಡೆ, ನಿರ್ದೇಶಕರಾದ ವೀರಣ್ಣಾ ಹಲಶೆಟ್ಟೆ, ಭದ್ರಿನಾಥ ಪಾಟೀಲ್, ಮಲ್ಲಿಕಾರ್ಜುನ ಚಿರಡೆ, ಪುಷ್ಪಾವತಿ ಮಾಮಾ ಉಪಸ್ಥಿತರಿದ್ದರು. ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಣೆ ಮಾಡಿ ವಂದಿಸಿದರು. ವಿವೇಕಾನಂದ ವಸದ ಮತ್ತು ಮಂಜುನಾಥ ಹೇಮಶೆಟ್ಟಿ ವಚನ ಗಾಯನ ನಡೆಸಿಕೊಟ್ಟರು.
ಇಡೀ ಪ್ರಕೃತಿಯಲ್ಲಿ ಮನುಷ್ಯ ಮಾತ್ರ ವಿಚಾರ ಮಾಡುವ ಶಕ್ತಿ ಪಡೆದಿದ್ದಾನೆ. ಹೀಗಾಗಿ ಆತ ಜ್ಞಾನ ಪರಂಪರೆಯಲ್ಲಿ ನಡೆಯಬೇಕು. ನಮ್ಮದು ಕೃಷಿ ಪ್ರಧಾನ ದೇಶ. ವರ್ಷವಿಡೀ ದುಡಿಯುವ ರೈತ ಶ್ರಾವಣದ ಮಳೆಗಾಲದಲ್ಲಿ ಜ್ಞಾನದ ಕೇಳುಗನಾಗಬೇಕು. ಜ್ಞಾನ ಶ್ರವಣಕ್ಕೆ ಶ್ರಾವಣ ಮೀಸಲು.
— > ಜಗದ್ಗುರು ಡಾ.ಗಂಗಾದೇವಿ ಮಾತಾಜಿ ಬಸವಧರ್ಮ ಪೀಠ, ಕೂಡಲಸಂಗಮ