Discontent erupts in Kai Camp 
ರಾಜ್ಯ

ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ಚಿಮುಲ್​ ಚುನಾವಣಾ ವಿಚಾರವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಕೈ ಪಾಳಯದಲ್ಲಿ ಅಸಮಾಧಾನ ಭುಗಿಲೆದಿದ್ದಿದೆ. ಸ್ವಪಕ್ಷೀಯ ಚಿಮುಲ್​ ನಿರ್ದೇಶಕ ಎನ್​.ಸಿ.ವೆಂಕಟೇಶ್​ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ.
ಗೆಲ್ಲುತ್ತಿದ್ದಂತೆ ಕೆಲ ಕೈ ನಾಯಕರನ್ನು ಖಾಲಿ ಡಬ್ಬಾಗಳು ಎಂಬುದಾಗಿ ಟೀಕಿಸಿದ ವೆಂಕಟೇಶ್​ ಒಕ್ಕೂಟದ ಚುನಾವಣೆಯಲ್ಲಿ ಹೇಗೆಲ್ಲ ನಡೆದುಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಇದರ ಬಗ್ಗೆ ಗಮನ ಸೆಳೆಯುವ ಜತೆಗೆ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂಗೆ ದೂರು ಸಲ್ಲಿಸಲಾಗುವುದು ಎಂದು ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ ತಿಳಿಸಿದರು.
ಹಿಂದಿನ ಜಿಪಂ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ತೀವ್ರ ಪೈಪೋಟಿ ನಡುವೆ ಎನ್​.ಸಿ.ವೆಂಕಟೇಶ್​ ಬಿ ಫಾಮ್​ರ್ ಕೊಡಲಾಗಿತ್ತು. ಆದರೆ ಗೆದ್ದ ಬಳಿಕ ಅಧ್ಯಕ್ಷರ ಆಯ್ಕೆ ವೇಳೆ ಪಕ್ಷದ ಅಭ್ಯರ್ಥಿಯ ಪರವಾಗಿ ನಿಲ್ಲುವುದಾಗಿ ಆಣೆ ಮಾಡಿ ವಂಚಿಸಿದ ಮಹಾನುಭಾವ ಆತ. ಹಣವನ್ನು ಲೂಟಿ ಮಾಡಿಕೊಂಡು ಡಬ್ಬಾ ತುಂಬಿಸಿಕೊಂಡಿದ್ದಾರೆ. ನಾವುಗಳು ಖಾಲಿ ಡಬ್ಬಾಗಳಾಗಿ ಉಳಿದುಕೊಂಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಹಾಲು ಸಹಕಾರ ಒಕ್ಕೂಟದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ವರಿಷ್ಠರು ಎಲ್ಲರನ್ನೂ ಕರೆದು ಚರ್ಚಿಸಬೇಕಾಗಿತ್ತು. ಆದರೆ ಈ ಪ್ರಕ್ರಿಯೆ ನಡೆಯಲಿಲ್ಲ. ಇದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದರು. ಇದರಿಂದ ಗೊಂದಲ ಉಂಟಾಯಿತು ಎಂದರು.
ಕಾಂಗ್ರೆಸ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಬಣ, ಚಿಕ್ಕಬಳ್ಳಾಪುರ ಶಾಸಕ ಪ್ರದಿಪ್​ ಈಶ್ವರ್​ ಬಣ ಎಂಬುದು ಇಲ್ಲ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್​.ರಮೇಶ್​ ಮಾತನಾಡಿ, ಚಿಮುಲ್​ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯು ಹಣವನ್ನು ಹಂಚಿ ಗೆದ್ದಿದ್ದಾರೆ. ಆದರೂ ಅನಿರೀಕ್ಷಿತ ಫಲಿತಾಂಶದ ಹೊಣೆಯನ್ನು ನಾನೊಬ್ಬನೇ ಹೊರುತ್ತೇನೆ. ತಡವಾಗಿ, ಅದರಲ್ಲೂ ಆತುರಾತುರವಾಗಿ ಕೈಗೊಂಡ ಸ್ಪರ್ಧೆಯ ನಿರ್ಧಾರಕ್ಕೆ ಸೋಲು ಕಾಣಬೇಕಾಯಿತು ಎಂದು ಹೇಳಿದರು.
ಬ್ಲಾಕ್​ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಮಂಡಿಕಲ್​ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಮುನೇಗೌಡ, ಮುಖಂಡ ಎಚ್​.ವಿ.ಸೋಮಶೇಖರ್​ ಇದ್ದರು.