ಬೆಂಗಳೂರು: ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯದಲ್ಲಿ ಬೇಜವಾಬ್ದಾರಿತನ ತೋರುವ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನಡೆಸಿದ್ದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾಗಿ ಕೆಲಸ ಮಾಡದೆ ಬೇಜವಾಬ್ದಾರಿತನ ತೋರುವ ಕಾಯಂ ಅಧಿಕಾರಿಗಳ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇಜವಾಬ್ದಾರಿತನ ತೋರಿದರೆ, ಅವರನ್ನು ಕೆಲಸದಿಂದಲೇ ವಜಾಗೊಳಿಸಲಾಗುವುದು ಎಂದರು.
ನಗರದಲ್ಲಿ ಮೇಲಿನ ಮೂರು ಅಂಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಶೀಘ್ರದಲ್ಲೇ ನಾಗರಿಕರಿಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಬಳಿಕ, ನಾಗರಿಕರಿಂದ ತ್ಯಾಜ್ಯ ತೆರವುಗೊಳಿಸದಿರುವುದು, ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಬಿಡಾಡಿ ವಾಹನಗಳನ್ನು ತೆರವುಗೊಳಿಸದಿರುವ ಕುರಿತು ದೂರುಗಳು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಈವರೆಗೆ 1,211 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಂದಾಜು 300 ಕಿ.ಮೀ. ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಆರಂಭದಲ್ಲಿದ್ದ ವೇಗ ಇದೀಗ ಕಾಣುತ್ತಿಲ್ಲ. ಇದೇ ವೇಗದಲ್ಲಿ ಕಾರ್ಯ ಮುಂದುವರಿದರೆ ಇನ್ನೂ 2 ತಿಂಗಳು ಬೇಕಾಗುತ್ತದೆ. ಆದ್ದರಿಂದ, ತೆರವು ಕಾರ್ಯದ ವೇಗ ಹೆಚ್ಚಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಒತ್ತುವರಿ ತೆರವು ಮಾಡಿದ ಬಳಿಕ ಮತ್ತೆ ಅತಿಕ್ರಮಣ ಮಾಡುತ್ತಿರುವ ಕುರಿತು ನಾಗರಿಕರಿಂದ ಹಲವು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಮರು ಅತಿಕ್ರಮಣ ಮಾಡಿರುವವರ ಮೆಟೀರಿಯಲ್ ಜಪ್ತಿ ಮಾಡುವ ಜತೆಗೆ ನಿಯಮಾನುಸಾರ ಗರಿಷ್ಠ ದಂಡ ವಿಧಿಸಬೇಕು ಎಂದು ಸಚಿವರು ತಾಕೀತು ಮಾಡಿದರು.
ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಿ. ಜಗದೀಶ್ ಮತ್ತು ಡಾ. ಕೆ.ವಿ.ರಾಜೇಂದ್ರ ಸೇರಿ ಅಪರ ಆಯುಕ್ತರು,ಮುಖ್ಯ ಅಭಿಯಂತರರು ಮತ್ತಿತರರಿದ್ದರು.
ಸಂಚಾರ ಪೊಲೀಸ್ ಇಲಾಖೆಯು ವಶಪಡಿಸಿಕೊಂಡಿರುವ ವಾಹನಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಕಾರಣ, ಅವು ವಿಲೇವಾರಿಯಾಗದೆ ಪೊಲೀಸ್ ಠಾಣೆಗಳ ಬಳಿಯೇ ಉಳಿದಿವೆ. ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ವಶದಲ್ಲಿರುವ ವಾಹನಗಳಿಗಾಗಿ ಕಂದಾಯ ಇಲಾಖೆಯ ಜಾಗ ಗುರುತಿಸಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲ ವಾಹನಗಳನ್ನು ಆ ಜಾಗಗಳಿಗೆ ಸ್ಥಳಾಂತರಿಸುತ್ತೇವೆ.
ಕೃಷ್ಣಬೈರೇಗೌಡ, ಬೆಂಗಳೂರು ಅಭಿವೃದ್ಧಿ ಸಚಿವ.