ಆನೇಕಲ್ ತಾಲೂಕಿನ ಮುತ್ತನಲ್ಲೂರಿನಲ್ಲಿ ಭೂಸ್ವಾಧಿನ ವಿರೋಧಿಸಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿಯು ಪಂಜಿನ ದೀಪದ ಮೆರವಣಿಗೆ ಮಾಡುವ ಮೂಲಕ ತಾಯಂದಿರ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಮೆರವಣಿಗೆಯಲ್ಲಿ ಸುಶೀಲಮ್ಮ, ಚಂದ್ರಮ್ಮ, ಪುಷ್ಪಾ ಸೋಮಶೇಖರ್ ರೆಡ್ಡಿ, ರಾಧಾ ನಾಗರಾಜರೆಡ್ಡಿ, ಜಯಲಕ್ಷ್ಮಮ್ಮ, ಸುನಂದಮ್ಮ, ಸಂಪ್ರಿತ, ಶಶಿಕಲಾ, ಚಂದ್ರಿಕ, ಮೇಜರ್ ರಾಘುರಾಮರೆಡ್ಡಿ, ಬಿಕ್ಕನಹಳ್ಳಿ ಅಶೋಕ್ ಕುಮಾರ್, ಹರೀಶ್ ರೆಡ್ಡಿ, ಬಸವರಾಜು, ರಾಹುಲ್ ಇತರರು ಇದ್ದರು.
ಸರ್ಜಾಪುರ : ಹೋಬಳಿಯ ಮುತ್ತಾನಲ್ಲೂರಿನಲ್ಲಿ ಭೂಸ್ವಾಧಿನ ವಿರೋಧಿಸಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಸತ್ಯಾಗ್ರಹ ಸೋಮವಾರಕ್ಕೆ 306ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತಾಯಂದಿರ ದಿನದ ಅಂಗವಾಗಿ ಒನಕೆ ಮತ್ತು ಪಂಜಿನ ದೀಪ ಹಿಡಿದು ರೈತರು ಪ್ರತಿಭಟಿಸಿದರು.
ಹೋರಾಟಗಾರ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಮಾತನಾಡಿ, ಸರ್ಜಾಪುರ ಹೋಬಳಿಯ 12 ಹಳ್ಳಿಗಳ ರೈತರ ಜಮೀನು ಕೇವಲ ಆಸ್ತಿ ಅಲ್ಲ, ಸಾವಿರಾರು ಕುಟುಂಬಗಳ ಬದುಕಿನ ಆಧಾರ. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿದೆ. ರೈತರ ಅಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ತೆಗೆದುಕೊಳ್ಳುವ ನಿರ್ಧಾರವನ್ನು ಒಪ್ಪುವುದಿಲ್ಲ ಎಂದರು.
305 ದಿನಗಳಿಂದ ಗ್ರಾಮಸ್ಥರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದು, ಸರ್ಕಾರ ಸಮಸ್ಯೆಗೆ ಸ್ಪಂದಿಸದೆ ರ್ನಿಲಕ್ಷ$್ಯ ವಹಿಸಿದೆ. ನಮ್ಮ ಜಮೀನು, ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಎಷ್ಟೇ ಕಷ್ಟ ಬಂದರೂ ಹೋರಾಟ ಮುಂದುವರಿಯುತ್ತದೆ ಎಂದರು.
ಹೋರಾಟಗಾರ್ತಿ ಉಮಾ ಪರಶುರಾಮ್ ಮಾತನಾಡಿ, ರೈತರ ತ್ಯಾಗ ಮತ್ತು ಪರಿಶ್ರಮದಿಂದಲೇ ಸಮಾಜ ಬದುಕುತ್ತಿದೆ. ಆದರೆ, ಪ್ರಸ್ತುತ ಅದೇ ರೈತರು ಜಮೀನಿಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಸರ್ಕಾರ ರೈತರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ನಮ್ಮ ಮಕ್ಕಳು ಕೃಷಿ ಭೂಮಿಯಲ್ಲೇ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ನಮ್ಮದು. ಆದರೆ, ಭೂಸ್ವಾಧಿನದಿಂದ ಗ್ರಾಮಗಳ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಭೂಸ್ವಾಧಿನ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ಎಚ್ಚರಿಸಿದರು.
ರೈತರ ಆಕ್ರೋಶ : ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದಿದೆ. ಆದರೆ, ರೈತರ ಸಮಸ್ಯೆಗೆ ಸ್ಪಂದಿಸದೆ, ಭೂಸ್ವಾಧಿನದ ಮೂಲಕ ಅವರ ಬದುಕಿಗೆ ಹೊಡೆಯುತ್ತಿದೆ. ಆದ್ದರಿಂದ ನಾವು ಸರ್ಕಾರಕ್ಕೆ 6ನೇ ಗ್ಯಾರಂಟಿ ಘೋಷಿಸುತ್ತಿದ್ದೇವೆ. ರೈತರ ಬದುಕು, ಜಮೀನು ಮತ್ತು ಹಕ್ಕುಗಳನ್ನು ಕಾಪಾಡದ ಸರ್ಕಾರವನ್ನು ಜನರ ಶಕ್ತಿಯಿಂದಲೇ ಅಧಿಕಾರದಿಂದ ದೂರ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.