ನೂರಾರು ಅಂಗವಿಕಲ ಅಭ್ಯರ್ಥಿಗಳು ಆಕ್ರೋಶ  
ರಾಜ್ಯ

ವಯೋಮಿತಿ ಸಡಿಲಿಕೆಗೆ ಸರ್ಕಾರಕ್ಕೆ ಪತ್ರ ಬರೆದಿರುವ ಅಂಗವಿಕಲ ಅಭ್ಯರ್ಥಿಗಳು- age relaxation

ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹೆಚ್ಚುವರಿ ವಯೋಮಿತಿ ಸಡಿಲಿಕೆ ನೀಡದಿರುವುದಕ್ಕೆ ನೂರಾರು ಅಂಗವಿಕಲ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡುವಂತೆ ಒತ್ತಾಯಿಸಿ ಅಭ್ಯರ್ಥಿಗಳ ಸಂಘವು, ಸಿಎಂ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ, ಇಲಾಖೆ ಆಯುಕ್ತರಿಗೆ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದೆ.
ನೇಮಕಾತಿ ಅಧಿಸೂಚನೆಯಲ್ಲಿ ಸಾಮಾನ್ಯ ಸೇರಿ ಇತರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದ್ದರೂ ಅತ್ಯಂತ ಅಗತ್ಯವಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯೋಮಿತಿ ಸಡಿಲಿಕೆ ನೀಡಿಲ್ಲ. ಇದರಿಂದ ಅನೇಕ ಅರ್ಹ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾಗಲಿದ್ದಾರೆ. ಕೇಂದ್ರ ಸರ್ಕಾರದ ನಿಯಮಗಳು, ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಅಂಗವಿಕಲರಿಗೆ ಸಾಮಾನ್ಯ ವಯೋಮಿತಿಯ ಜತೆಗೆ 10 ವರ್ಷ ಹೆಚ್ಚುವರಿ ವಯೋಮಿತಿ ಸಡಿಲಿಕೆ ನೀಡಲಾಗುತ್ತಿದೆ ಎಂದು ಅಭ್ಯರ್ಥಿ ಡಾ.ಶಾಂತಪ್ಪ ರಾಠೋಡ್ ಹೇಳಿದರು.
ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಪ್ರಕಾರವೂ ಅಂಗವಿಕಲರಿಗೆ ವಿಶೇಷ ಸೌಲಭ್ಯ, ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅಸ್ತಿತ್ವದಲ್ಲಿರುವ ವಯೋಮಿತಿಯ ಜತೆಗೆ ಕನಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು. ಪ್ರಸ್ತುತ ಹೊರಡಿಸಲಾಗಿರುವ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಕ್ಷಣವೇ ಸೂಕ್ತ ತಿದ್ದುಪಡಿ ತರಬೇಕು. ಅಂಗವಿಕಲತೆಯಿಂದ ಶಿಕ್ಷಣ ಪೂರ್ಣಗೊಳಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ, ಮಾನವೀಯತೆ ದೃಷ್ಟಿಯಿಂದ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ತಕ್ಷಣವೇ ಮನವಿ ಪುರಸ್ಕರಿಸಿ ನ್ಯಾಯ ಒದಗಿಸಬೇಕೆಂದು ವಿನಂತಿಸಿಕೊಂಡರು.