- ರಾಷ್ಟ್ರ ರಾಜಧಾನಿಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ
- ದೆಹಲಿಯ ಪಥಸಂಚಲನದಲ್ಲಿ ಕಾಣಲಿಲ್ಲ ಕರ್ನಾಟಕದ ಟ್ಯಾಬ್ಲೋ
- ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮೂಲಕ ಬೇಸರ
ಬೆಂಗಳೂರು: 77ನೇ ಗಣರಾಜ್ಯೋತ್ಸವ ದಿನಾಚರಣಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ಕರ್ನಾಟಕದ 'ಮಿಲೆಟ್ಸ್ ಟು ಮೈಕ್ರೋಚಿಪ್' ಸ್ತಬ್ಧಚಿತ್ರ ಕಾಣಿಸಲಿಲ್ಲ. ಇದು ರಾಜ್ಯದ ಜನತೆಗೆ ಭಾರೀ ಬೇಸರ ತಂದಿದೆ. ಈ ವಿಚಾರಕ್ಕೆ ಸ್ಯಾಂಡಲ್ವುಡ್ ನಿರ್ದೇಶಕ ಸಿಂಪಲ್ ಸುನಿ ಕೂಡ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಮಹಾದಾಸೆಯನ್ನು ಕರ್ನಾಟಕವು ಹೊಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ರಾಜ್ಯದ ಟ್ಯಾಬ್ಲೋ ಪ್ರದರ್ಶನಕ್ಕೆ ನಿರಾಕರಿಸಿರುವುದು ಕನ್ನಡಿಗರ ಮನಸ್ಸಿಗೆ ಘಾಸಿ ಉಂಟುಮಾಡಿದೆ.
ಕೇಂದ್ರ ಸರ್ಕಾರ ನಡೆಗೆ ಸುನಿ ಕಿಡಿನುಡಿ
ಈ ಬಗ್ಗೆ ಟ್ವೀಟ್ (ಪ್ರಸ್ತುತ ಎಕ್ಸ್) ಮಾಡಿರುವ ನಿರ್ದೇಶಕ ಸಿಂಪಲ್ ಸುನಿ, "ಸರ್ವರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು. ವಿವಿಧತೆಯಲ್ಲಿ ಏಕತೆ ಭಾರತದ ಹೆಮ್ಮೆ. ಆದರೆ, ಈ ಬಾರಿಯ ಪರೇಡ್ನಲ್ಲಿ ನಮ್ಮ ನೆಚ್ಚಿನ ಕರ್ನಾಟಕದ ಟ್ಯಾಬ್ಲೋ ಸ್ತಬ್ಧ ದಿಬ್ಬಣ ಕಾಣೆಯಾಗಿದ್ದು ಮಾತ್ರ ವಿಷಾದನೀಯ. ಪರ್ಯಾಯ ನೀತಿಯಂತೆ ನಮಗೆ ತಪ್ಪಿದ್ದು ಎಂದುಕೊಂಡರೂ ಗುಜರಾತ್ ಮತ್ತು ಉತ್ತರಪ್ರದೇಶಕ್ಕೆ ಮಾತ್ರ ಪ್ರತಿ ವರ್ಷ ಅವಕಾಶ ದೊರಕುತ್ತಿರುವ ಇಬ್ಬಂದಿ ನೀತಿಗೆ ಮಾತ್ರ ಧಿಕ್ಕಾರ" ಎಂದಿದ್ದಾರೆ.