ಕೈಗಾರಿಕೆಗಳಿಂದ ವಿಷತ್ಯಾಜ್ಯ ಹರಿಯುತ್ತಿರುವ ಮಾಣಿಕನಗರದ ಗುರುಗಂಗಾ ಹಳ್ಳಕ್ಕೆ ಶುಕ್ರವಾರ ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ದೀಪಿಕಾ ನಾಯ್ಕರ್, ಎಡಿ ರಾಜಶೇಖರ ಬುಳ್ಳಾ, ಪಿಡಿಒ ಜಗದೇವಿ ಗೋರ್ಟೆ ಇತರರಿದ್ದರು.
- ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಪರಿಶೀಲನೆ
- ಕೈಗಾರಿಕೆ, ಪರಿಸರ ಇಲಾಖೆ ಅಧಿಕಾರಿಗಳ ಜತೆ ಚರ್ಚೆ
ಹುಮನಾಬಾದ್: ಮಾಣಿಕನಗರದ ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ವಿಷತ್ಯಾಜ್ಯ ಹರಿಯುತ್ತಿರುವುದನ್ನು ಶಾಶ್ವತವಾಗಿ ತಡೆಗಟ್ಟುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಬೆನ್ನಲ್ಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಳ್ಳಕ್ಕೆ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ತ್ಯಾಜ್ಯ ಹರಿಸಲಾಗುತ್ತಿದೆ ಎಂಬ ಗ್ರಾಮಸ್ಥರ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಜತೆ ಸಂಬಂಧಿತ ಕೈಗಾರಿಕೆ ಮತ್ತು ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಹಳ್ಳಕ್ಕೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಳ್ಳಕ್ಕೆ ಯಾವುದೇ ರೀತಿಯ ರಾಸಾಯನಿಕ ತ್ಯಾಜ್ಯ ಸೇರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್, ಸಹಾಯಕ ನಿರ್ದೇಶಕ ರಾಜಶೇಖರ ಬುಳ್ಳಾ, ಪಿಡಿಒ ಜಗದೇವಿ ಗೋರ್ಟೆ ಇತರರಿದ್ದರು.
ಕಳೆದ ಸೋಮವಾರ ಶ್ರೀ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಗುರುಗಂಗಾ ಹಳ್ಳದ ಮಾಲಿನ್ಯ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿ
ಹುಮನಾಬಾದ್ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪಂಚಾಯಿತಿಗಳಿಗೆ ನಿಯಮಿತ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಸೂಚಿಸಿದರು. ಧುಮ್ಮನಸೂರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ವಿಬಿ&ಜಿ ರಾಮ್ ಜಿ ಕಾಮಗಾರಿ ಪ್ರಗತಿ ಮತ್ತು ಗುಣಮಟ್ಟ ಪರಿಶೀಲಿಸಿ ನಿಗದಿತ ಮಾನದಂಡದೊಂದಿಗೆ ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಅಗತ್ಯ ಸಲಹೆ&ಸೂಚನೆಗಳನ್ನು ನೀಡಿದರು. ನಂತರ ಹುಮನಾಬಾದ್ ತಾಪಂ ಸಭಾಂಗಣದಲ್ಲಿ ವಿಬಿ&ಜಿ ರಾಮ್ ಜಿ ಹಾಗೂ ಈ&ಸ್ವತ್ತು ಖಾತೆ ಅಭಿಯಾನ ಯಶಸ್ವಿಗೊಳಿಸುವ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ತಾಪಂ ಇಒ ದೀಪಿಕಾ ಬಿ.ನಾಯ್ಕರ್, ಎಡಿ(ಆಡಳಿತ) ಜಯಪ್ರಕಾಶ ಚವ್ಹಾಣ್, ಎಡಿಪಿಸಿ ದೀಪಕ್, ಎಡಿ (ಪಂ.ರಾ) ಶಿವಲೀಲಾ, ಎಡಿ (ಗ್ರಾಉ) ರಾಜಶೇಖರ ಬುಳ್ಳಾ, ಪಿಡಿಒ ಮಲ್ಲಿಕಾರ್ಜುನ ಸಾಗರ್ ಇತರರಿದ್ದರು.