ಬೆಂಗಳೂರು: ರಾಜ್ಯದಲ್ಲಿನ್ನು ಮಾಸ್ಟರ್ ಪ್ಲ್ಯಾನ್ನ ವ್ಯಾಪ್ತಿಯಲ್ಲಿರುವ ಭೂಮಿಗೆ ಭೂಪರಿವರ್ತನೆ ಮಾಡಿಸುವ ಅಗತ್ಯವಿಲ್ಲ. ಬದಲಿಗೆ ನೇರ ಯೋಜನೆ ಅನುಮೋದನೆಗೆ (ಪ್ಲ್ಯಾನ್ ಅಪ್ರೂವಲ್) ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬಹುದು! ಮಾಸ್ಟರ್ಪ್ಲಾ್ಯನ್ ವ್ಯಾಪ್ತಿಯಿಂದ ಹೊರಗಿರುವ ಭೂ ಪರಿವರ್ತನೆಗೆ 30 ದಿನಗಳ ಸಮಯ ನಿಗದಿ ಮಾಡಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಡಿಸಿಗಳಿಗೆ ಸೂಚನೆ: ಕಂದಾಯ ಸಚಿವ ಕೃಷ್ಣಬೈರೇಗೌಡ ಬುಧವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿ.23ರಂದು ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಭೂಪರಿವರ್ತನೆಯನ್ನು ಸರಳೀಕೃತ ಮಾಡಿ ಅಭಿವೃದ್ಧಿ ಪಥದತ್ತ ಸಾಗಲು ಉತ್ತೇಜನ ನೀಡಲಾಗುತ್ತಿದೆ. ಬಂಡವಾಳ ಹೂಡಿಕೆದಾರರು ಖರೀದಿಸುವ ಭೂಮಿಯನ್ನು ಸುಲಭವಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಇದಾಗಿದೆ. ಅನುಷ್ಠಾನ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಚಿವರು ಡಿಸಿಗಳಿಗೆ ಸೂಚಿಸಿದರು.
ಆನ್ಲೈನ್ ಅರ್ಜಿ: ಕಾಯ್ದೆ ತಿದ್ದುಪಡಿ ಪ್ರಕಾರ ಭೂ ಪರಿವರ್ತನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ಮಾಸ್ಟರ್ ಪ್ಲ್ಯಾನ್ನ ಒಳಗಿರುವ ಭೂಮಿಯ ಸ್ವಭಾವದ ಆಧಾರದ ಮೇಲೆ ಭೂಮಾಲೀಕರು ನೇರ ಯೋಜನೆ ಅನುಮೋದನೆಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಇದೇ ಸಮಯದಲ್ಲಿ ಭೂಪರಿವರ್ತನೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇನ್ನು ಸಣ್ಣ ಕೈಗಾರಿಕೆಗಳು ಅಂದರೆ 2 ಎಕರೆವರೆಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ.
ಎರಡು ಎಕರೆ ಮೀರಿದರೆ ಅಂತಹ ಜಮೀನು ಭೂ ಪರಿವರ್ತನೆ ಕಡ್ಡಾಯವಾಗಿ ಆಗಬೇಕಿದೆ. ಇದಲ್ಲದೆ, ದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಾಗಿದೆ. ಹೀಗಾಗಿ ಇದಕ್ಕೆ ಭೂಪರಿವರ್ತನೆ ಷರತ್ತು ವಿನಾಯಿತಿ ನೀಡಲಾಗಿದೆ. ಇಂಧನ ಇಲಾಖೆಯ ಅನುಮತಿ ಪಡೆದಿದ್ದರೆ, ನವೀಕರಿಸಬಹುದಾದ ಇಂಧನ ಯೋಜನಾ ಘಟಕವನ್ನು ನಿರ್ಮಾಣ ಮಾಡಲು ಭೂಪರಿವರ್ತನೆ ಅಗತ್ಯ ಇರುವುದಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಆಡಳಿತ ಯಂತ್ರವನ್ನು ಮತ್ತಷ್ಚು ಸರಳಗೊಳಿಸುವ ಹಾಗೂ ಭೂಪರಿವರ್ತನೆ ಹೆಸರಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ತರಲಾಗಿದೆ. ಡಿ.23ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಕಂದಾಯ ಇಲಾಖೆ ಮತ್ತಷ್ಟು ಜನಸ್ನೇಹಿ ಆಗುವತ್ತ ದಾಪುಗಾಲು ಇಡುತ್ತಿದೆ.
ಬಹುಕಾಲದಿಂದ ತಾಂಡ, ಹಟ್ಟಿ, ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿರುವ 1.10 ಲಕ್ಷ ಕುಟುಂಬಗಳಿಗೆ ಫೆಬ್ರವರಿಯಲ್ಲಿ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ತಯಾರಿ ನಡೆಸಿದೆ. ಬುಧವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ ತಾಂಡ, ಹಟ್ಟಿ, ಗೊಲ್ಲರಹಟ್ಟಿಗಳಲ್ಲಿ ವಾಸವಾಗಿರುವರಿಗೆ ಹಕ್ಕುಪತ್ರ ಮತ್ತು ದಾಖಲೆ ನೀಡಲು 2017ರಲ್ಲಿ ಕಾನೂನು ತಿದ್ದುಪಡಿ ಮಾಡಿರುವುದರ ಕುರಿತು ಚರ್ಚಿಸಿದರು.
ಕಾಯ್ದೆಗೆ ತಿದ್ದುಪಡಿ ತಂದ ನಂತರ 2017ರಿಂದ 2023ರ ಮೇವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಮೇ 2023 ರಿಂದ 2025ರವರೆಗೆ 1.11 ಲಕ್ಷ ಹಕ್ಕು ಪತ್ರ ನೀಡಲಾಗಿದೆ. ಇದಾದ ಮೇಲೆ ಮತ್ತೆ 1.10 ಲಕ್ಷ ಹಕ್ಕುಪತ್ರ ನೀಡುವ ಪ್ರಕ್ರಿಯೆ ಶುರುವಾಗಿತ್ತು. ಈ ಬಗ್ಗೆ ಪ್ರತಿಯೊಂದು ಜಿಲ್ಲೆಯಲ್ಲಿ ಮಾಹಿತಿ ಪಡೆದ ಕಂದಾಯ ಸಚಿವರು, ಫೆಬ್ರವರಿಗೆ ಮುನ್ನ ಹಕ್ಕುಪತ್ರ ಸಿದ್ಧವಾಗಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.