ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ವಿಭಾಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಂತರಸರ ನೆನಪು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಎಚ್​.ಟಿ.ಪೋತೆ ಮಾತನಾಡಿದರು. ಮಹಿಪಾಲರಡ್ಡಿ ಮುನ್ನೂರ, ಡಾ.ಪರಶುರಾಮ ಇದ್ದರು. 
ರಾಜ್ಯ

ಪ್ರಜ್ಞಾವಂತ ಲೇಖಕರಲ್ಲಿ ಸಾಹಿತ್ಯಾಸಕ್ತಿ ಕುಂಠಿತ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಎಚ್​.ಟಿ.ಪೋತೆ ಕಳವಳ
  • ಗುಲ್ಬರ್ಗ ವಿವಿಯಲ್ಲಿ ಶಾಂತರಸರ ನೆನಪು ವಿಶೇಷ ಉಪನ್ಯಾಸ
ಕಲಬುರಗಿ: ಲೇಖಕರು ಅಧ್ಯಯನ ಕಡೆ ಗಮನಹರಿಸಿದಾಗ ಮಾತ್ರ ಸಾಹಿತ್ಯ ಕ್ಷೇತ್ರಕ್ಕೆ ಹೊಸದೊಂದು ಕಟ್ಟಿಕೊಡಲು ಸಾಧ್ಯ. ಪ್ರಜ್ಞಾವಂತ ಲೇಖಕರು ಸಾಹಿತ್ಯ ಆಸಕ್ತಿ ವಹಿಸದಿರುವುದು ವಿಪರ್ಯಾಸ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕಲಾ ನಿಕಾಯ ಡೀನ್​, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್​.ಟಿ. ಪೋತೆ ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಬೆಂಗಳೂರು ಸಂಸ ಥಿಯೇಟರ್​ ಸಹಯೋಗದಡಿ ಗುಲ್ಬರ್ಗ ವಿವಿ ಹರಿಹರ ಸಭಾಂಗಣದಲ್ಲಿ ಶಾಂತರಸರ 101ನೇ ಜನ್ಮದಿನೋತ್ಸವ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಶಾಂತರಸರ ನೆನಪು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ನೆಲದ ಶರಣರು, ಸೂಫಿಗಳು, ದಾಸರು, ತತ್ವಪದಕಾರರು ಬಂಡಾಯ, ವೈಚಾರಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಪ್ರಜ್ಞಾವಂತ ಯುವ ಲೇಖಕರಲ್ಲಿ ಓದುವ ನಿರಾಸಕ್ತಿ ಇರುವುದು ಸರಿಯಲ್ಲ. ಸಾಹಿತ್ಯ ಓದಿನಿಂದ ಬರವಣಿಗೆ ಸಾಧ್ಯವಿದೆ. ಆದ್ದರಿಂದ ಹೊಸ ತಲೆಮಾರಿನ ಲೇಖಕರು ಮತ್ತು ವಿದ್ಯಾರ್ಥಿಗಳು ಕಾಲದ ಅನಿವಾರ್ಯತೆ ಮತ್ತು ಭವಿಷ್ಯದ ಹಿನ್ನೆಲೆಯಲ್ಲಿ ಶಾಂತರಸರ ಸಾಹಿತ್ಯ ಅಧ್ಯಯನ ಮಾಡಿದರೆ ಸಾಹಿತ್ಯದ ಗಟ್ಟಿತನ ಮತ್ತು ಪರಂಪರೆ ಉಳಿಸಿ ಬೆಳೆಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸ ನೀಡಿದ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಪ್ರಯೋಗಶೀಲ ಸಾಹಿತ್ಯ ಬೆಳವಣಿಗೆಗೆ ಶಾಂತರಸರ ಕೊಡುಗೆ ಅಪಾರ. ಪರ್ಷಿಯನ್​, ಅರೇಬಿಕ್​ ಮತ್ತು ಉರ್ದು ಭಾಷೆ ಗಜಲ್​ಗಳನ್ನು ಕನ್ನಡಕ್ಕೆ ಅನುವಾದಿಸಿ ಅನೇಕ ಬರಹಗಾರರನ್ನು ಬೆಳೆಸಿದ ಹಿರಿಮೆ ಅವರದು. ಶಾಂತರಸರು ಬದುಕಿರುವವರೆಗೂ ಬರೆದರು ಮತ್ತು ಬರೆದಂತೆ ಬದುಕಿದರು ಎಂದು ಸ್ಮರಿಸಿದರು.
ಶಾಂತರಸರು ವೀರಣ್ಣಗೌಡ ನೀರಮಾನ್ವಿ, ಚೆನ್ನಬಸಪ್ಪ ಬೆಟ್ಟದೂರ ಇತರ ಬರಹಗಾರರನ್ನು ಸಂಟಿಸಿ ಕಲ್ಯಾಣ ಕರ್ನಾಟಕದ ಸಾಹಿತ್ಯ ಚರಿತ್ರೆ ಮತ್ತು ಸಾಂಸ್ಕೃತಿಕ ಕ್ಷೇತ್ರ ಬೆಳೆಸಿದ್ದಾರೆ. ಮದುವೆ, ಪುರಾಣ, ಜಯಂತಿ, ಹಬ್ಬದಂತಹ ಸಂದರ್ಭಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಸಿ ದುಂದುವೆಚ್ಚ ಮಾಡುವ ಶ್ರೀಮಂತರ ಮನವೊಲಿಸಿ ಮದುವೆಯ ನೆನಪಿಗೆ ಗ್ರಂಥಗಳನ್ನು ಪ್ರಕಟಿಸಿ ಬಿಡುಗಡೆ ಮಾಡಿಸುತ್ತಿದ್ದರು ಎಂದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಪಿ. ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ 14 ವರ್ಷಗಳಿಂದ ನಿರಂತರ ದೃಶ್ಯ ಕಲೆ, ಸಾಹಿತ್ಯ ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ವಿನೂತನ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರಸ್ತುತ ಬಹುಶಿಸ್ತಿನ ವಿಷಯದತ್ತಲೂ ಗಮನಹರಿಸುತ್ತಿದೆ ಎಂದು ತಿಳಿಸಿದರು.
ಶಾಂತರಸರ ಪುತ್ರ ಬಸವಪ್ರಭು ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ ಇತರರಿದ್ದರು. ಡಾ.ಎಂ.ಬಿ. ಕಟ್ಟಿ ಸ್ವಾಗತಿಸಿದರು. ಡಾ.ಸುನಿತಾ ಝಳಕಿಕರ್​ ಪ್ರಾರ್ಥಿಸಿದರು. ಡಾ.ಶಿವಶರಣಪ್ಪ ಕೂಡ್ಲಿ ನಿರೂಪಣೆ ಮಾಡಿದರು. ಬಸವರಾಜ ಮಠಪತಿ ವಂದಿಸಿದರು.

ಶಾಂತರಸರು ಸ್ಥಿತಪ್ರರು. ಈ ಭಾಗದ ಸೃಜನಶೀಲ ಲೇಖಕರನ್ನು ಬೆಳೆಸಿದ್ದ ಅವರ ಬದುಕು, ಬರಹ ಮತ್ತು ಕೊಡುಗೆ ತಿಳಿಯಲು ಅವರ ಸಾಹಿತ್ಯ ಓದಬೇಕು. ಸಮಾಜದ ನೋವು, ಮಿಡಿತ, ಸೆಳೆತ ಶಾಂತರಸರ ಗಜಲ್​ಗಳಲ್ಲಿ ಅಡಗಿದೆ. ಶಾಂತರಸರ ಪ್ರಭಾವಕ್ಕೆ ಒಳಗಾಗದೆ ಸೃಜನಶೀಲ ಬರವಣಿಗೆ ಅಸಾಧ್ಯ. ವಿದ್ಯಾವಂತರು ಸಾಹಿತ್ಯ ಮತ್ತು ಬರವಣಿಗೆಗೆ ಒತ್ತು ನೀಡಬೇಕು.

> ಪ್ರೊ.ಎಚ್​.ಟಿ.ಪೋತೆ

ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿವಿ