ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನಕ್ಕೆ ರೈಲ್ವೇ ವಿಭಾಗೀಯ ಅಧಿಕಾರಿ ವೆಂಕಟೇಶ್ ನಾಯಕ್ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ, ಕೆನೆರಾ ಬ್ಯಾಂಕ್ ಡಿಜಿಎಂ ಶುಭಂ ಕುಮಾರ್ ಮತ್ತಿತರರಿದ್ದರು.  
ರಾಜ್ಯ

ರೈಲ್ವೆ ಪಿಂಚಣಿದಾರರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ

ಬೆಂಗಳೂರು ರೈಲ್ವೇ ವಿಭಾಗೀಯ ಕಚೇರಿಯಲ್ಲಿ ಕಾರ್ಯಕ್ರಮ

ಬೆಂಗಳೂರು : ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವತಿಯಿಂದ ಪಿಂಚಣಿದಾರರ ಅನುಕೂಲಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 5.0ರ ಅಂಗವಾಗಿ ಬೆಂಗಳೂರಿನ ಎಂ.ಜಿ. ಕಾಲೋನಿಯ ಅನುಗ್ರಹ ರೈಲ್ವೆ ಸಮುದಾಯ ಭವನದಲ್ಲಿ ಮೆಗಾ ಅಭಿಯಾನ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಹಿರಿಯ ವಿಭಾಗೀಯ ಅಧಿಕಾರಿ ವೆಂಕಟೇಶ್ ನಾಯಕ್, ಪಿಂಚಣಿದಾರರು ಬ್ಯಾಂಕ್‌ಗಳಿಗೆ ಭೇಟಿ ನೀಡದೆ ತಾವಿರುವ ಸ್ಥಳದಿಂದಲೇ ಡಿಜಿಟಲ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ನವೆಂಬರ್ ತಿಂಗಳಾದ್ಯಂತ ಬೆಂಗಳೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಶುಭಂ ಕುಮಾರ್, ವಿಡಿಯೊ ಕರೆ ಹಾಗೂ ಮನೆಬಾಗಿಲಿನ ಬ್ಯಾಂಕಿಂಗ್ ಸೇವೆಗಳ ಮೂಲಕವೂ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿದೆ ಎಂದರು. ವಿಭಾಗೀಯ ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ, ರೈಲ್ವೆ ಆಸ್ಪತ್ರೆಯಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳು ಹಾಗೂ ವಿಶೇಷ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ರೈಲ್ವೆ ಪಿಂಚಣಿದಾರರಿಗೆ ಬಹುಪಯೋಗಿ ಆರೋಗ್ಯ ಶಿಬಿರವನ್ನೂ ಆಯೋಜಿಸಲಾಗಿತ್ತು. ಪಿಂಚಣಿದಾರರ ಕಲ್ಯಾಣ ಸಂಘದ ಪದಾಧಿಕಾರಿಗಳು ರೈಲ್ವೆ ಇಲಾಖೆಯ ಕ್ರಮಗಳನ್ನು ಶ್ಲಾಘಿಸಿದರು.

ನ. 30ರವರೆಗೆ ಬೆಂಗಳೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ಅಭಿಯಾನ ಮುಂದುವರಿಯಲಿದ್ದು, ಪಿಂಚಣಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.