ಸರದಿ ಸಾಲಿನಲ್ಲಿ ಕ್ಯಾನ್ ಇಟ್ಟಿರುವುದು. 
ರಾಜ್ಯ

diesel: ಸಿಗದ ಡೀಸೆಲ್ ಕೃಷಿ ಚಟುವಟಿಕೆ ಸ್ತಬ್ಧ

ಗದಗ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಪೂರ್ವ ಮಳೆ
  • ಡೀಸೆಲ್ ಸಿಗದೆ ರೈತರು ಕಂಗಾಲು
  • ಕೆಲಸ ಬಿಟ್ಟು ಡೀಸೆಲ್‌ಗಾಗಿ ಕಾಯುವ ಸ್ಥಿತಿ
  • ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಅಭಾವ
ಮಲ್ಲಿಕಾರ್ಜುನ ಕಳಾಸಾಪುರ ಲಕ್ಷ್ಮೇಶ್ವರ
ಮುಂಗಾರು ಪೂರ್ವ ಮಳೆ ಈ ಬಾರಿ ಉತ್ತಮವಾಗಿದೆ. ಹೀಗಾಗಿ ರೈತರು ಬಿತ್ತನೆಗೆ ಭೂಮಿ ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಕೃಷಿ ಕಾರ್ಯಕ್ಕೆ ಡೀಸೆಲ್ ಸಿಗದೆ ರೈತರು ಕಂಗಾಲಾಗಿದ್ದು, ಕೆಲಸ ಬಿಟ್ಟು ಡೀಸೆಲ್‌ಗಾಗಿ ಕಾಯುವ ಸ್ಥಿತಿ ಅನ್ನದಾತರದ್ದಾಗಿದೆ.
ಕಳೆದ 2-3 ತಿಂಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ದದ ಪರಿಣಾಮ ದೇಶದ ಮೇಲೆ ಪರಿಣಾಮ ಬೀರುತ್ತಿದ್ದು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಆಗಿವೆ. ಇದರ ಮಧ್ಯೆ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ದೊರೆಯುತ್ತಿಲ್ಲ ಇದು ಕೃಷಿ ಕಾರ್ಯಕ್ಕೆ ತೊಡಕಾಗುತ್ತಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು, ರೈತರು ಭೂಮಿಗಳನ್ನು ಸಜ್ಜುಗೊಳಿಸಲು ಮುಂದಾಗುತ್ತಿದ್ದಾರೆ. ಮೊದಲಿನಂತೆ ಎತ್ತುಗಳಿಂದ ಉಳುಮೆ ಮಾಡುವವರಿಲ್ಲದಂತಾಗಿದ್ದು, ಬಹುತೇಕ ಎಲ್ಲ ರೈತರು ಟ್ರ್ಯಾಕ್ಟರ್ ಉಳಿಮೆ ಅವಲಂಭಿಸುವಂತಾಗಿದೆ. ಆದರೆ, ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಅಭಾವ ಕಂಡು ಬರುತ್ತಿದ್ದು, ಶನಿವಾರ ಮತ್ತು ಭಾನುವಾರ ಡೀಸೆಲ್ ಲಭ್ಯವಿದ್ದ ಎಲ್ಲ ಬಂಕ್‌ಗಳ ಮುಂದೆ ರೈತರ ವಾಹನಗಳು ಮತ್ತು ಕ್ಯಾನ್‌ಗಳೊಂದಿಗೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಕಾಯ್ದರು ಸಿಗದ ಡೀಸೆಲ್: ಪಟ್ಟಣದಲ್ಲಿ ಸುಮಾರು 8-10 ಪೆಟ್ರೊಲ್ ಬಂಕ್‌ಗಳಿವೆ. ಎಲ್ಲ ಬಂಕ್‌ಗಳಲ್ಲಿ ಭಾನುವಾರ ಮಧ್ಯಾಹ್ನದೊಳಗಾಗಿ ಡೀಸೆಲ್ ಖಾಲಿಯಾಗಿದ್ದು ರೈತರು ಬರಿಗೈಯಲ್ಲಿ ಮರಳುವಂತಾಯಿತು. ಶನಿವಾರ ಕೆಲವೊಂದು ಬಂಕ್‌ಗಳ ಮುಂದೆ ಟ್ರ್ಯಾಕ್ಟರ್‌ಗಳ ಸರದಿ ಸಾಲು ಕಂಡು ಬಂದಿತು. ಕೆಲವು ಬಂಕ್‌ಗಳ ಡೀಸೆಲ್ ಶನಿವಾರವೇ ಖಾಲಿಯಾಗಿತ್ತು. ಭಾನುವಾರ ಮುಂಜಾನೆಯಿಂದ ಪ್ರಾರಂಭವಾದ ಡೀಸೆಲ್ ಕ್ಯೂ ಗಂಟೆಗಂಟಲೇ ವಿಸ್ತರಿಸುತ್ತ ಹೋಯಿತು. ಭಾನುವಾರ ಬೆಳಗ್ಗೆ ಬಂಕ್‌ಗಳ ಮುಂದೆ ನೂರಾರು ಕ್ಯಾನ್‌ಗಳೊಂದಿಗೆ ಜನರು ಮತ್ತು ವಾಹನಗಳು ಸರದಿ ಸಾಲಿಗಳು ಕಂಡು ಬಂದವು. ಮಧ್ಯಾಹ್ನದ ಹೊತ್ತಿಗೆ ಎಲ್ಲ ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿ ಪರದಾಡಿದರು.
ಹಳ್ಳಿಗಳಲ್ಲೂ ಸಮಸ್ಯೆ: ಕ್ಯಾನ್‌ಗಳಲ್ಲಿ ಕೇವಲ ಎರಡು ಸಾವಿರ ರೂಗಳ ಡೀಸೆಲ್ ಒಯ್ಯಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ರೈತರು 3-4 ಕ್ಯಾನ್‌ಗಳನ್ನು ಹೊತ್ತು ತಂದಿದ್ದರು. ಪಟ್ಟಣ ಅಲ್ಲದೆ ತಾಲೂಕಿನ ಶಿಗ್ಲಿ, ಸೂರಣಗಿ, ಗೊಜನೂರು, ಬಾಲೇಹೊಸೂರು, ಮಾಡಳ್ಳಿ, ಯಳವತ್ತಿ ಇತ್ಯಾದಿ ಗ್ರಾಮಗಳಲ್ಲಿಯೂ ಡೀಸೆಲ್ ದೊರೆಯದೆ ರೈತರಿಗೆ ಬಿಸಿ ತಟ್ಟಿದೆ.
ಈಗಾಗಲೇ ಎಲ್ಲೆಡೆ ಮಳೆ ಉತ್ತಮವಾಗಿದೆ. ಹರಗುವುದು ಸೇರಿದಂತೆ ಹೆಸರು, ಶೇಂಗಾ, ಸೋಯಾ, ಉದ್ದು ಬೆಳೆಗಳ ಬಿತ್ತನೆಗೆ ರೈತರು ಸಿದ್ಧವಾಗುತ್ತಿದ್ದಾರೆ. ಬಹುತೇಕ ರೈತರು, ಬಿತ್ತಲು, ಹರಗಲು, ಎಡೆ ಹೊಡೆಯಲು ಸಹ ಟ್ರ್ಯಾಕ್ಟರ್ ಅವಲಂಬಿಸಿದ್ದಾರೆ. ಇಂತಹ ಅವಧಿಯಲ್ಲಿ ಡೀಸೆಲ್ ದೊರೆಯದಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳುವಂತಾಗಿದೆ. ಇದೇ ತಿಂಗಳಿಂದ ಬಿತ್ತನೆ ಕಾರ್ಯ ಬಹುತೇಕ ಚುರುಕುಗೊಳ್ಳಲಿರುವುದರಿಂದ ಡೀಸೆಲ್ ಕೊರತೆ ರೈತರನ್ನು ಬಾಧಿಸಲಿದೆ.
"

ಇದೀಗ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಇಂತಹ ಸಂದರ್ಭದಲ್ಲಿ ಡೀಸೆಲ್‌ಗಾಗಿ ಹಗಲು-ರಾತ್ರಿ ಕಾಯುವ ಗೋಳು ಬಂದಿದೆ. ಒಟ್ಟಿನಲ್ಲಿ ರೈತರ ಬದುಕು ಹೋರಾಟದಿಂದಲೇ ಕೂಡಿದೆ. ರೈತರಿಗೆ ಸಮರ್ಪಕ ಡೀಸೆಲ್ ದೊರೆಯುವಂತೆ ನೋಡಿಕ್ಳೋಬೇಕು.

— ನಂದೀಶ ಬಂಡಿವಾಡ, ರೈತ