- ಕುತೂಹಲ ಮೂಡಿಸಿದ ಪುರಸಭೆ ಅಧ್ಯಕ್ಷರ ನಡೆ
- ಅವಿಶ್ವಾಸ ಮಂಡನೆಗೆ ಸದಸ್ಯರ ನಿರ್ಧಾರ
ಕೆಂಭಾವಿ: ಸ್ಥಳಿಯ ಪುರಸಭೆಯ ರಾಜಕೀಯ ಬೆಳವಣಿಗೆ ರಾಜ್ಯದ ಗಮನ ಸೆಳೆಯುತ್ತಿದೆ. ಗ್ರಾಮ ಪಂಚಾಯಿತಿಯಿಂದ ನೇರ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಆಡಳಿತ ಸೌಧದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು.
ಗದ್ದುಗೆಗೇರಲು ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ತಲಾ 10 ತಿಂಗಳ ಅಧಿಕಾರ ಹಂಚಿಕೆಯ ಒಳಒಪ್ಪಂದಕ್ಕೆ ಸಮ್ಮತಿ ಸೂಚಿಸಲಾಯಿತು. ಅದರಂತೆ ಈ ಮೊದಲು ಅಧ್ಯಕ್ಷರಾಗಿದ್ದ ರಹೆಮಾನ್ ಪಟೇಲ್ ಯಲಗೋಡ ರಾಜೀನಾಮೆ ನೀಡಿದ ಬಳಿಕ ತೆರವಾದ ಸ್ಥಾನಕ್ಕೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ್ ಆಯ್ಕೆಯಾದರು.
ಈಗ ಒಳಒಪ್ಪಂದದ ಪ್ರಕಾರ ಅಧ್ಯಕ್ಷರ ಅವಧಿ ಮುಗಿದಿದ್ದು, ಉಳಿದ ಅವಧಿಗೆ ಆಯ್ಕೆ ನಡೆಯಬೇಕಿದೆ. ಇಂಥದರಲ್ಲಿ ಅಧ್ಯಕ್ಷೆ ಪ್ರಿಯಾ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ವಾರದ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಸೋಮವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಪ್ರಿಯಾ ತಮ್ಮ ರಾಜೀನಾಮೆ ಹಿಂಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಮುಂದಿನ ಅವಧಿಗೆ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದವರಿಗೆ ತೀವ್ರ ಹಿನ್ನಡೆಯಾಗಿದ್ದಲ್ಲದೆ ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದ ಪ್ರಿಯಾ ಇದ್ದಕ್ಕಿದ್ದಂತೆ ವಾಪಸ್ ಪಡೆದಿದ್ದೇಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಸ್ಥಳಿಯ ಮುಖಂಡರು ಅಧ್ಯಕ್ಷರು ಮತ್ತವರ ಪತಿ ರಾಮನಗೌಡರನ್ನು ಸಂಪರ್ಕಿಸಲು ಯತ್ನಿಸಿದ್ದರೂ ಮೊಬೈಲ್ ಸ್ವಿಚ್ಡ್ ಆಫ್ ಬರ್ತಾ ಇದೆ. ದಿಢೀರ್ ಬೆಳವಣಿಗೆಯಿಂದ ಸಿಡಿದೆದ್ದಿರುವ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ಒಟ್ಟಾರೆ ರಾಜೀನಾಮೆ ಪ್ರಹಸನ ಯಾವ ಹಂತಕ್ಕೆ ಬಂದು ನಿಲ್ಲುತ್ತದೋ ಎಂಬುದು ಕುತೂಹಲ ಕೆರಳಿಸಿದೆ.