ರಾಜ್ಯ

ಲಂಚದಿಂದಲೇ 8 ಕೋಟಿ ರೂ. ಆಸ್ತಿ ಮಾಡಿದ್ದನೇ ಕನ್ನಾಳೆ?: ಇ.ಡಿ ತನಿಖೆ ವೇಳೆ ಇನ್ನಷ್ಟು ಅಕ್ರಮಗಳ ಸುಳಿವು ಪತ್ತೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ದ ಹಗರಣ ಬಗೆದಷ್ಟೂ ಹೊರಬರುತ್ತಿದೆ. ಮಧ್ಯವರ್ತಿ ಬಸವರಾಜ್​ ಕನ್ನಾಳೆ ಅಭ್ಯರ್ಥಿಗಳಿಂದ ಪಡೆದ ಲಂಚದ ಹಣದಿಂದ ಅಂದಾಜು 8 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಸಿರುವುದು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ದ ಹಗರಣ ಬಗೆದಷ್ಟೂ ಹೊರಬರುತ್ತಿದೆ. ಮಧ್ಯವರ್ತಿ ಬಸವರಾಜ್​ ಕನ್ನಾಳೆ ಅಭ್ಯರ್ಥಿಗಳಿಂದ ಪಡೆದ ಲಂಚದ ಹಣದಿಂದ ಅಂದಾಜು 8 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಸಿರುವುದು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.

ಪಶುವೈದ್ಯಾಧಿಕಾರಿ 400 ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​, ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್​ ಗಂಗ್ವಾರ್​, ಸದಸ್ಯೆ ಬಿ.ವಿ.ಗೀತಾ ಹಾಗೂ ಮಧ್ಯವರ್ತಿ ಬಸವರಾಜ್​ ಕನ್ನಾಳೆ ವ್ಯವಹಾರ ಜಾಲಾಡುತ್ತಿರುವ ಇ.ಡಿ ಅಧಿಕಾರಿಗಳು 2021ರಿಂದ ನಾಲ್ವರು ಆರೋಪಿಗಳ ಬ್ಯಾಂಕ್​ ಖಾತೆ, ಹಣಕಾಸು ವ್ಯವಹಾರ, ಮೂರನೇ ವ್ಯಕ್ತಿಯಿಂದ ಲಕ್ಷ ಲಕ್ಷ ಹಣ ಪಡೆದಿರುವುದು ಹಾಗೂ ಅದೇ ಲಂಚದ ಹಣದಿಂದ ಚಿನ್ನಾಭರಣ ಖರೀದಿ ಸೇರಿ ವಿವಿಧ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ. ಮಧ್ಯವರ್ತಿ ಕನ್ನಾಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ನೇರ ನಗದು ವ್ಯವಹಾರ

ಅಭ್ಯರ್ಥಿಗಳು ಮತ್ತು ಕೆಲ ಪಾಲಕರಿಂದ ಬಂದ ಡೀಲ್​ ಹಣದಿಂದ ಕನ್ನಾಳೆ ನೇರವಾಗಿ ಕೃಷಿ ಜಮೀನು, ಆಸ್ತಿ ಖರೀದಿ ಮಾಡುತ್ತಿದ್ದ. ಬ್ಯಾಂಕ್​ ಅಥವಾ ಚೆಕ್​ ಮೂಲಕ ಹಣ ವರ್ಗಾವಣೆ ಮಾಡಿದರೆ ಮುಂದೆ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆಂದು ತಿಳಿದಿದ್ದ ಕನ್ನಾಳೆ ಬಂದ ಹಣದಿಂದ ಆಸ್ತಿ ಮಾಲೀಕರಿಗೆ ನೇರವಾಗಿ ನಗದು ನೀಡುತ್ತಿದ್ದ. ಫಾರ್ಮ್​ಹೌಸ್​ ನಿರ್ಮಾಣಕ್ಕೆ ಬೇಕಾದ ಅಗತ್ಯ ಸಲಕರಣೆ ಖರೀದಿಗೆ ನಗದು ನೀಡಿರುವುದು ತನಿಖೆ ವೇಳೆ ಬಯಲಾಗಿದೆ. ಆರೋಪಿ ಕನ್ನಾಳೆ ಕಡಿಮೆ ಅವಧಿಯಲ್ಲಿ ಬೆಂಗಳೂರಿನ ಸಂಜಯನಗರ ಸೇರಿ ವಿವಿಧ ಕಡೆ ಮನೆ ಖರೀದಿ, ತಮ್ಮ ತಂದೆಯ ಹೆಸರಿನಲ್ಲಿ ಬೀದರ್​ ಜಿಲ್ಲೆ ಭಾಲ್ಕಿಯಲ್ಲಿ ಜಮೀನು ಹೊಂದಿದ್ದ. ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಅವರಿಂದ ಪಡೆದ ಹಣದಲ್ಲಿ ಶೇ.40 ಹಣ ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್​ಗೆ ತಲುಪುವಂತೆ ಮಾಡುತ್ತಿದ್ದ. ಉಳಿದ ಶೇ.60 ಲಾಭದ ಹಣ ಕನ್ನಾಳೆ ಪಾಲಾಗುತ್ತಿತ್ತು ಎನ್ನಲಾಗಿದೆ.

ಬ್ಯಾಂಕ್​ ದಾಖಲೆ ಸಂಗ್ರಹ

ಆಯೋಗದ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಐಎಎಸ್​ ಅಧಿಕಾರಿ ಜ್ಞಾನೇಂದ್ರ, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​ ಅಣತಿಯಂತೆ ಮಧ್ಯವರ್ತಿಗಳು, ಕೆಲ ಸದಸ್ಯರು ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ. ಅವುಗಳಿಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಿವಿಧ ಬ್ಯಾಂಕ್​ಗಳಿಂದ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮಕ್ಕೆ ಪಂಚತಾರಾ ನಂಟು

ಪಶುವೈದ್ಯಾಧಿಕಾರಿಗಳ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಕೇರಳ, ಕರ್ನಾಟಕ ಗಡಿಯಲ್ಲಿರುವ ರೆಸಾರ್ಟ್​, ಬೆಂಗಳೂರಿನ ಫೈವ್​ಸ್ಟಾರ್​ ಹೋಟೆಲ್​ನಲ್ಲಿ ತರಬೇತಿ ನೀಡಿದ್ದರು ಎನ್ನಲಾಗಿದೆ. ಪರೀಕ್ಷೆಗೂ ಮುನ್ನವೇ ಚೀಟಿಯೊಂದರಲ್ಲಿ ಕೆಲವು ಉತ್ತರಗಳನ್ನು ಬರೆದು ಕೊಡಲಾಗಿತ್ತು. ಮಾನಸಿಕ ಸಾಮರ್ಥ್ಯ, ಹೊಂದಿಸಿ ಬರೆಯುವುದು, ಸಂಖ್ಯಾಶಾಸ್ತ್ರ ವಿಷಯದ ಉತ್ತರಗಳು ಸೇರಿ ಯಾವ ಪ್ರಶ್ನೆಗೆ ಯಾವ ಉತ್ತರ ಎಂಬ ಗೊಂದಲ ಅಭ್ಯರ್ಥಿಗಳಲ್ಲಿ ಉಂಟಾಗುತ್ತಿತ್ತು. ಇದರಿಂದ ಪ್ರಶ್ನೆಪತ್ರಿಕೆ ಮತ್ತು ಒಎಂಆರ್​ ಶೀಟ್​ ನೀಡಿ ಸ್ಟಾರ್​ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದ್ದಾರೆ. ನಂತರ ಆ ಒಎಂಆರ್​ ಶೀಟ್​ಗಳನ್ನು ಮೌಲ್ಯಮಾಪನ ಮಾಡುವ ಪಟ್ಟಿಯಲ್ಲಿ ಸೇರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಇ.ಡಿ ಸಂಗ್ರಹಿಸಿದೆ. ಇಂಗ್ಲಿಷ್​ನಲ್ಲಿ ಹೆಸರು, ವಿಳಾಸ ಬರೆಯಲು ಬಾರದ ಅಭ್ಯರ್ಥಿಯೊಬ್ಬನಿಗೆ ಹಣದ ಆಸೆಗೆ ಆಯ್ಕೆ ಪಟ್ಟಿಯಲ್ಲಿ ಹೆಸರು ಬರುವಂತೆ ಮಾಡಿದ್ದರು ಎನ್ನಲಾಗಿದೆ.