ನೆಲಮಂಗಲದ ಶ್ರೀ ವೀರಭದ್ರೇಶ್ವರ ಪ್ರಾಥನಾ ಮಂದಿರ ಕವಾಡಿ ಮಠದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಸಮಾರೋಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್​ ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಜಿಲ್ಲಾ ನಿರ್ದೇಶಕ ಉಮರಬ್ಬ, ಜಿಲ್ಲಾ ಮೇಲ್ವಿಚಾರಕ ದರ್ಶನ, ತಾಲೂಕು ನಿರ್ದೇಶಕಿ ಸುಜಾತಾ ಶೆಟ್ಟಿ ಇದ್ದರು, 
ರಾಜ್ಯ

ವ್ಯಸನಮುಕ್ತ ಸಮಾಜ ರೂಪಿಸುತ್ತಿದೆ ಧರ್ಮಸ್ಥಳ ಸಂಸ್ಥೆ / NELMANGAL

ನೆಲಮಂಗಲ : ಮದ್ಯವ್ಯಸನಿಗಳನ್ನು ಪ್ರೀತಿ, ವಿಶ್ವಾಸದಿಂದ ಮನಪರಿವರ್ತನೆ ಮಾಡಿ ವ್ಯಸನಮುಕ್ತ ಸಮಾಜ ರೂಪಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್​ ಮಾಜಿ ಅಧ್ಯಕ್ಷ ವಿ.ರಾಮಸ್ವಾಮಿ ಹೇಳಿದರು.
ನಗರದ ಶ್ರೀ ವೀರಭದ್ರೇಶ್ವರ ಪ್ರಾಥನಾ ಮಂದಿರ ಕವಾಡಿ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್​, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್​ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ 2023ನೇ ಮದ್ಯವರ್ಜನ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.
ವ್ಯಸನ ನಿವಾರಣೆ ಮಾಡುವ ಮೂಲಕ ಕುಟುಂಬಗಳು ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಮಾಡಲಾಗುತ್ತಿದೆ. ಕುಡಿತ ಬಿಡಲು ದೃಢ ಸಂಕಲ್ಪ ಮಾಡಿ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಲು ಗುರಿ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಸಾಧಿಸುವ ಛಲಹೊಂದಿರಬೇಕು ಎಂದರು.
ರಾಜ್ಯಾದ್ಯಂತ ಶ್ರೀ ಕ್ಷೇತ್ರ ಸಂಸ್ಥೆ 2023 ಮದ್ಯವರ್ಜನ ಶಿಬಿರ ಆಯೋಜಿಸಿದ್ದು, 1.30ಲಕ್ಷ ಮಂದಿ ಹೊಸ ಜೀವನ ಕಲ್ಪಿಸಿಕೊಳ್ಳಲು ಸಾಕ್ಷಿಯಾಗಿದೆ. ಜತೆಗೆ ಧರ್ಮಸ್ಥಳದಲ್ಲೇ ಸುಮಾರು 6 ಕೋಟಿ ಶಿಬಿರ ಕೇಂದ್ರ ಆರಂಭಿಸಲಾಗಿದೆ. ಜತೆಗೆ ಮಹಿಳೆಯರನ್ನು ಸಬಲೀಕರಣ ಲಕ್ಷಾಂತರ ಕೋಟಿ ಹಣವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡಿದ್ದು, 53 ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಂಭಾಂಶವನ್ನು ಸಂಘಕ್ಕೆ ನೀಡಿತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ಹೇಳಿದರು.
ಶಿಬಿರ ಸಮಿತಿ ಅಧ್ಯಕ್ಷ ಸ್ಟುಡಿಯೋ ಮಂಜುನಾಥ್​ ಮಾತನಾಡಿ, ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು, ಬಾಳನ್ನು ಹಸನು ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ದೊಡ್ಡದು. ಯಾವುದೇ ಸರ್ಕಾರ ಮಾಡದ ಕೆಲಸ ಶ್ರೀ ಕ್ಷೇತ್ರ ಮಾಡುತ್ತಿದೆ ಎಂದರು.
ತಾಲೂಕು ಮೇಲ್ವಿಚಾರ ರಾಜೇಗೌಡ, ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯನಾಯಕ್​, ಸದಸ್ಯ ಭಾಗ್ಯಮ್ಮರಂಗಸ್ವಾಮಿ, ಗ್ರಾಪಂ ಸದಸ್ಯ ಬಸವರಾಜು, ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಮ್ಮ, ಶಿಬಿರದ ಉಪಾಧ್ಯಕ್ಷ ನವೀನ್​ಕುಮಾರ್​, ಹೇಂಮತ್​, ಗೌರವ ಸಹಲೆಗಾರ ಉಮೇಶ್​ಗೌಡ, ನಾಗರಾಜು, ಶ್ರೀನಿವಾಸ್​, ಕೋಶಾಧಿಕಾರಿ ವೆಂಕಟೇಶ್​, ಶಿಬಿರಾಧಿಕಾರಿ ನಾಗೇಂದ್ರ ಯೋಗ ಶಿಕ್ಷಕ ಮೋಹನ್​ಕುಮಾರ್​, ಬಿಜೆಪಿ ಮುಖಂಡರಾದ ನಟೇಶ್​, ಸೌಮ್ಯಾ, ಸುಮಾ ಇತರರಿದ್ದರು.
ಹೊಸಜೀವನಕ್ಕೆ ಕಾಲಿಟ್ಟವರಿಗೆ ಆರತಿ : ಮದ್ಯ ತ್ಯಜಿಸಿ ನವಜೀವನಕ್ಕೆ ಕಾಲಿಟ್ಟ ಶಿಬಿರಾರ್ಥಿಗಳನ್ನು ಅವರ ಪತ್ನಿಯರ ಜತೆ ನಿಲ್ಲಿಸಿ ಸಮಾರೋಪದ ಆರಂಭದಲ್ಲಿ ಮುತೆದೆಯರು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆಯರು ಆರತಿ ಬೆಳಗಿದರು. ಮದ್ಯವ್ಯಸನ ತ್ಯಜಿಸಿದ 50 ಮಂದಿ ನವಜೀವನ ಸಮಿತಿ ಸದಸ್ಯರು ಮಡದಿಯರ ತಲೆಗೆ ಹೂವು ಮೂಡಿಸಿದರು. ಆ ಮೂಲಕ ಕುಟುಂಬ ದಿನ ಆಚರಿಸಲಾಯಿತಲ್ಲದೇ ಹೊಸ ಬದುಕಿಗೆ ಪ್ರೇರಣೆ ದೊರೆಯಿತು.
ಕ್ರೀಡೆ ಹಾಗೂ ಸಾಂಸತಿಕ ಸ್ಪರ್ಧೆ ಆಯೋಜಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.