Dharmasthala Institute for the survival of humanity
ನೊಣವಿನಕೆರೆ: ಸಮಾಜದಲ್ಲಿ ನೊಂದವರನ್ನು ಗುರುತಿಸಿ, ವಸತಿ, ಮಾಸಾಶನದಂತಹ ಅನೇಕ ಯೋಜನೆಗಳನ್ನು ತಲುಪಿಸಿ ಅವರ ಜೀವನ ಮಟ್ಟ ಸುಧಾರಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೆರವಾಗಿದೆ ಎಂದು ಪಿಎಸ್ಐ ಬಸವರಾಜು ಸವಟಗಿ ಹೇಳಿದರು.
ತಾಲೂಕಿನ ಮೇಲನಹಳ್ಳಿಯಲ್ಲಿ ಸೋಮವಾರ ಪದ್ಮಮ್ಮ ಎಂಬುವವರಿಗೆ ನೊಣವಿನಕೆರೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಮನೆ ಹಸ್ತಾಂತರ ಮಾಡಿ ಮಾತನಾಡಿ, ಸಮಾಜದಲ್ಲಿ ಮಾನವೀಯತೆ ಉಳಿದಿದೆ ಎಂಬುದಕ್ಕೆ ಧರ್ಮಸ್ಥಳ ಸಂಸ್ಥೆ ಅನೇಕ ಯೋಜನೆಗಳ ಮೂಲಕ ಪದೇಪದೆ ಸಾಬೀತುಪಡಿಸುವ ಕಾರ್ಯ ಮಾಡುತ್ತಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರು ನೊಂದವರ ಕಣ್ಣೇರು ಒರೆಸುವ ಆಧುನಿಕ ಸಮಾಜದ ಮಾತೃ ಶಕ್ತಿಯಾಗಿ ಸೇವೆ ಮಾಡುತ್ತಿರುವುದು ಶ್ಲಾನೀಯ ಎಂದರು.
ಯೋಜನೆಯ ತುಮಕೂರು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ತಿಪಟೂರು ತಾಲೂಕಿನಲ್ಲಿ ಒಟ್ಟು 12 ವಾತ್ಸಲ್ಯ ಮನೆ ರಚನೆಯಾಗಿವೆ. ರಾಜ್ಯದಲ್ಲಿ ಒಟ್ಟು 670ಕ್ಕೂ ಅಧಿಕ ವಾತ್ಸಲ್ಯ ಮನೆ ರಚನೆ ಜತೆಗೆ ಮಾಸಾಶನ ಫಲಾನುಭಗಳಿಗೆ ವಾತ್ಸಲ್ಯ ಕಿಟ್ ಅಂದರೆ ಬಟ್ಟೆ, ಚಾಪೆ, ದಿಂಬು, ಹೊದಿಕೆ, ಪಾತ್ರೆ ಮತ್ತು ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಲಾಗುತ್ತದೆ. ಪ್ರತಿ ತಿಂಗಳು ಮಾಸಾಶನವಾಗಿ 1000ದಿಂದ 3000 ಸಾವಿರದವರೆಗೆ ನೀಡಲಾಗುತ್ತಿದ್ದು, ಕೆರೆ ಕಾಮಗಾರಿ, ಶುದ್ಧಗಂಗಾ ಘಟಕ, ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಶ್ರೀಕ್ಷೇತ್ರದ ಯೋಜನೆಯ ಮೂಲಕ ನಡೆಯುತ್ತಿವೆ ಎಂದರು.
ತಾಲೂಕು ಯೋಜನಾಧಿಕಾರಿ ಸುರೇಶ್, ಜಿಲ್ಲಾ ಜನಜಾಗೃತಿ ಸದಸ್ಯರಾದ ದೇವಾನಂದ, ದಯಾನಂದ ಕಾಬೋರಪ್ಪ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷಿ$್ಮ, ಮೇಲ್ವಿಚಾರಕ ಮುನಿಕೃಷ್ಣ, ಸೇವಾ ಪ್ರತಿನಿಧಿ ಇಂದ್ರಮ್ಮ, ರಶ್ಮಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.