ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಹದೇಶ್ವರರು ತಪಸ್ಸು ಮಾಡಿದ ತಪಸಾರೆಯ ಶ್ರೀ ಮಲೆಮಹದೇಶ್ವರ ಸ್ವಾಮಿ ದೇಗುಲದಲ್ಲಿ ಧನುರ್ಮಾದ ಹಿನ್ನಲೆ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿತು.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಹದೇಶ್ವರರು ತಪಸ್ಸು ಮಾಡಿದ್ದ ತಪಸಾರೆಯಲ್ಲಿ ನಿರ್ಮಿಸಿರುವ ಶ್ರೀ ಮಹದೇಶ್ವರಸ್ವಾಮಿ ದೇಗುಲದಲ್ಲಿ ಸೋಮವಾರ ರಾತ್ರಿ ಧನುರ್ಮಾಸ ಹಿನ್ನೆಲೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸ್ವಾಮಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿತು.
ಈ ಭಾಗದ ಎಪ್ಪತ್ತೇಳು ಮಲೆಗಳಲ್ಲಿ ಸಂಚರಿಸಿದ ಶ್ರೀ ಮಲೆಮಹದೇಶ್ವರರು ಶ್ರವಣನ ಸಂಹಾರಕ್ಕೂ ಮುನ್ನ ಅರಣ್ಯ ಪ್ರದೇಶದಿಂದ ಕೂಡಿರುವ ಈ ತಪಸಾರೆಯಲ್ಲಿ ತಪಸ್ಸು ಮಾಡಿದರು. ಇದರ ನೆನಪಿನಾರ್ಥ ಭಕ್ತರು ಸ್ವಾಮಿಯ ದೇಗುಲವನ್ನು ನಿರ್ಮಿಸಿ ಪೂಜಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಧನುರ್ಮಾಸದ ಆರಂಭದ ಸೋಮವಾರದಂದು ರಾತ್ರಿ ಸಾಲೂರು ಶ್ರೀಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸುವುದು ವಾಡಿಕೆ.
ಈ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು-ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 8 ಗಂಟೆ ಸುಮಾರು ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸ್ವಾಮಿಗೆ ಗಂಗೆಪೂಜೆ, ಗಣಪತಿ ಪೂಜೆ, ಕಳಸ ಪೂಜೆ, ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಅಷ್ಟೋತ್ತರ ಪೂಜೆ ಸಲ್ಲಿಸಲಾಯಿತು. ದೀಪ, ಧೂಪಧಾರತಿ ಸೇವೆಯೊಂದಿಗೆ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ಮಾದಪ್ಪನಿಗೆ ಧನುರ್ಮಾಸದ ವಿಶೇಷ ಪೂಜೆ ನೆರವೇರಿಸಲಾಯಿತು.
ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು. ರಾತ್ರಿ ಮಾದಪ್ಪನ ದೇವರ ಗುಡ್ಡರಿಂದ ಕೀರ್ತನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ ಭಕ್ತರು ನೆರೆದಿದ್ದರು. ಇದಕ್ಕೂ ಮನ್ನ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
ರಾಗಿ ಮುದ್ದೆ ಪ್ರಸಾದ: ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಮ.ಬೆಟ್ಟದ ತಪ್ಪಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಅರ್ಚಕರು, ಸಾಲೂರು ಮಠದ ಭಕ್ತರು ನೆರೆದಿದ್ದರು. ಭಕ್ತರಿಗೆ ರಾಗಿಮುದ್ದೆ, ಹಲಸಿನಕಾಯಿ ಗೊಜ್ಜು, ಅವರೆಕಾಳು ಸಾಂಬಾರು, ಪಾಯಸ, ಒಬ್ಬಟ್ಟು, ತುಪ್ಪದ ಕಜ್ಜಾಯ, ಕುಂಬಳಕಾಯಿ ಪಲ್ಯ ಹಾಗೂ ಅನ್ನ, ತರಕಾರಿ ಸಾಂಬಾರ್ ಅನ್ನು ಉಣ ಬಡಿಸಲಾಯಿತು.