ಸುರಪುರ ನಗರದ ರಾಮ ಮಂದಿರದಲ್ಲಿ ರಾಮನವಮಿ ನಿಮಿತ್ತ ಶ್ರೀರಾಮ, ಲಕ್ಷ್ಮಮಣ ಸೀತೆ ಮೂರ್ತಿಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಯಿತು.
- ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ
- ದಿನವಿಡಿ ಭಜನೆ&ಸಂಗೀತೋತ್ಸವ
ಸುರಪುರ: ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ರಾಮನವಮಿಯನ್ನು ಶ್ರದ್ಧಾ&ಭಕ್ತಿಯಿಂದ ಆಚರಿಸಲಾಯಿತು. ಇಲ್ಲಿನ ರಾಮ ಮಂದಿರದಲ್ಲಿ ರಾಮನವಮಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ರಾಮ, ಲಕ್ಷ್ಮಣ, ಸೀತೆ ಮೂರ್ತಿಗಳಿಗೆ ಅಲಂಕಾರ, ಅಭಿಷೇಕ, ತೊಟ್ಟಿಲು ಸೇವಾ ಕಾರ್ಯಕ್ರಮಗಳು ನಡೆದವು.
ದೇವಸ್ಥಾನವನ್ನು ತಳಿರು, ತೋರಣ, ರಂಗೋಲಿ, ವಿವಿಧ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾಮನ ಜನ್ಮೋತ್ಸವ ನಿಮಿತ್ತ ಪುರೋಹಿತರು ವೇದಮಂತ್ರಗಳೊಂದಿಗೆ ಪೂಜೆ ನೆರವೇರಿಸಿದರು. ಭಕ್ತರು ಜೈ ಶ್ರೀರಾಮ... ಘೋಷಣೆಗಳನ್ನು ಕೂಗಿದರು. ದೇವಸ್ಥಾನದಲ್ಲಿ ಸಂಗೀತೋತ್ಸವ, ಮಹಿಳಾ ಭಜನಾ ಮಂಡಳಿಯ ಅನೇಕ ಸದಸ್ಯರು ಭಜನೆ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಸಂಗೀತ ಕಲಾವಿದರು ಶ್ರೀರಾಮನ ಭಕ್ತಿ ಗೀತೆ ಮತ್ತು ಮಹಿಮೆಯನ್ನು ಸುಶ್ರಾವ್ಯವಾಗಿ ಹಾಡಿ ಗಮನಸೆಳೆದರು.
ಭಕ್ತರು ದೇವಸ್ಥಾನಗಳಿಗೆ ತೆರಳಿ ಸಾಲುಗಟ್ಟಿ ನಿಂತು ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ, ಆಶೀರ್ವಾದ ಪಡೆದರು.ನಂತರ ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು. ಪಾನಕ, ಕೋಸಂಬರಿ ಹಂಚಲಾಯಿತು. ದೇವಸ್ಥಾನದಲ್ಲಿ ಸಂಜೆ ಭಜನೆ ಮತ್ತು ಸಾಂಸತಿಕ ಕಾರ್ಯಮಗಳು ಜರುಗಿದವು. ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಭಾಗವಹಿಸಿ ಹಬ್ಬಕ್ಕೆ ಮತ್ತಷ್ಟು ಕಳೆ ತಂದರು. ಒಟ್ಟಾರೆ ರಾಮಮಂದಿರದಲ್ಲಿ ರಾಮನವಮಿ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವದಿಂದ ಯಶಸ್ವಿಯಾಗಿ ಆಚರಿಸಲಾಯಿತು.
ದೇವಸ್ಥಾನದ ಪುರೋಹಿತರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ದೇವಸ್ಥಾನದಲ್ಲಿ ರಾಮ ನವಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ರಾಮನ ಜೀವನವೇ ಮಾನವನಿಗೆ ಆದರ್ಶಮಯ ದಾರಿದೀಪ. ಶ್ರೀರಾಮನು ಸತ್ಯ, ಧರ್ಮ ಮತ್ತು ನೀತಿಯ ಪ್ರತಿಕ. ಶ್ರೀರಾಮನ ಜೀವನದ ಸಹನೆ, ವಿನಯ ಮತ್ತು ಕೃತತೆ ಎಂಬ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬ ಮತ್ತು ಸಮಾಜದಲ್ಲಿ ಶಾಂತಿ ನೆಲಸುತ್ತದೆ. ಪೋಷಕರಿಗೆ ಗೌರವ, ಗುರುಗಳಿಗೆ ಭಕ್ತಿ, ಸಮಾಜದೊಂದಿಗೆ ಸೌಹಾರ್ದತೆ ಇವು ಕೂಡ ಶ್ರೀರಾಮಚಂದ್ರ ದೇವರಿಂದ ನಾವು ಕಲಿಯಬೇಕು. ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ&ಸೌಹಾರ್ದತೆ ಹೆಚ್ಚುತ್ತದೆ. ಪ್ರತಿಯೊಬ್ಬರು ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.