ಶ್ರೀಶೈಲದ ಜಗದ್ಗುರು ಸಾರಂಗಧರೇಶ್ವರ ರಾಷ್ಟ್ರೀಯ ಸೇವಾ ಪೀಠದಲ್ಲಿ ಯುಗಾದಿ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಶಿವ ದರ್ಶನ ಪ್ರವಚನವನ್ನು ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ನೆಲೋಗಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು. 
ರಾಜ್ಯ

ಶ್ರೀಶೈಲ ದರ್ಶನದಿಂದ ಭಕ್ತರ ಕಲ್ಯಾಣ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ನಿಡುಮಾಮಿಡಿ ಶ್ರೀ ಅಭಿಮತ
  • ಸಾರಂಗಮಠದಲ್ಲಿ ಯುಗಾದಿ ನಿಮಿತ್ತ ಶಿವ ದರ್ಶನ ಪ್ರವಚನ
ಶ್ರೀಶೈಲ: ಶ್ರೀಶೈಲ ಪರ್ವತದಲ್ಲಿ ನೆಲೆಸಿರುವ ಸೃಷ್ಟಿಕರ್ತ ಶಿವನ ಜ್ಯೋರ್ತಿಲಿಂಗ ರೂಪ ಹಾಗೂ ಶಕ್ತಿದೇವತೆ ಭ್ರಮರಾಂಬೆ ದರ್ಶನವನ್ನು ಏಕಕಾಲಕ್ಕೆ ಪಡೆಯುವುದರಿಂದ ಭಕ್ತರ ಕಲ್ಯಾಣವಾಗುತ್ತದೆ ಎಂದು ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಜಗದ್ಗುರು ಸಾರಂಗಧರೇಶ್ವರ ರಾಷ್ಟ್ರೀಯ ಸೇವಾ ಪೀಠದಲ್ಲಿ ಯುಗಾದಿ ಮಹೋತ್ಸವ ನಿಮಿತ್ತ ಆಯೋಜಿಸಿರುವ ಶಿವ ದರ್ಶನ ಪ್ರವಚನಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಪೂಜ್ಯರು, ಬದುಕಿನ ಲೌಕಿಕ ವ್ಯವಹಾರ ಜತೆ ವರ್ಷದ ಒಂದು ತಿಂಗಳು ಭಗವಂತನ ಆರಾಧನೆಗೆ ಮೀಸಲಿರಿಸಬೇಕು. ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಶರಣ&ಸಂತರ ತತ್ವಾದರ್ಶಗಳನ್ನು ಆಲಿಸುವುದರಿಂದ ಜೀವನ ಉದ್ಧಾರವಾಗಲಿದೆ ಎಂದರು.
ಶ್ರೀಶೈಲದ ಮೂಲ ಹೆಸರು ನಲ್ಲಮಲೈ. ಮೂಲ ದೇವನು ಶಿವನ ವಂಶಸ್ಥನಾದ ಬಾರನಿಂದಲೇ ಭಾರತವಾಗಿದೆ. 8ನೇ ಶತಮಾನದಿಂದ ಶ್ರೀಶೈಲದ ಪ್ರಾಚಿನ ಪರಂಪರೆಯ ಚಂದ್ರಗುಂಡ ಮಠ, ವಿಭೂತಿ ಮಠ, ಗಂಟಾ ಮಠ, ರುದ್ರಾ ಮಠ, ಸಾರಂಗಮಠಗಳು ನಿರಂತರ ದಾಸೋಹ ಹಾಗೂ ಧಾರ್ಮಿಕ ಸೇವೆ ಮಾಡುತ್ತಿವೆ. ವಿಶೇಷವಾಗಿ ಸಾರಂಗಮಠ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿನ ತನ್ನ ಶಾಖಾ ಮಠಗಳ ಮೂಲಕ ವೀರಶೈವ ಲಿಂಗಾಯತ ಧರ್ಮದ ಸಂರಣೆ ಮಾಡುತ್ತಿದೆ. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಭಕ್ತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಕೊಂಡಾಡಿದರು.
ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತ ಕುಲಕೋಟಿಯ ಉದ್ಧಾರಕ್ಕಾಗಿ ಶ್ರೀಶೈಲ ಕೈಲಾಸ ಪರ್ವತದಲ್ಲಿ ನೆಲೆಸಿರುವ ಭ್ರಮರಾಂಭಸಮೇತ ಮಲ್ಲಿಕಾರ್ಜುನ ಸ್ವಾಮಿಯ ದರ್ಶನದಿಂದ ದಾರಿದ್ರ$್ಯ ದೂರವಾಗಿ ಆಯುಷ್ಯ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗಲಿದೆ ಎಂದರು.
ನೆಲೋಗಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ, ಡಾ.ಜೆ.ಎನ್​. ರಾಮಕೃಷ್ಣೇಗೌಡ, ಸುನಂದಮ್ಮ ಹಿರೇಮಠ, ಮಲ್ಲಿಕಾರ್ಜುನ ಖೇಮಜಿ ಇತರರಿದ್ದರು.