ಕೆ. ಆರ್​. ರಸ್ತೆಯ ಗಾಯನ ಸಮಾಜದಲ್ಲಿ ಹಮ್ಮಿಕೊಂಡಿದ್ದ ವಿಪ್ರೋತ್ಸವದಲ್ಲಿ ಶ್ರೀನಾಥ್​, ಆಶಾ ದಿನೇಶ್​, ಅರಳುಮಲ್ಲಿಗೆ ಪಾರ್ಥಸಾರಥಿ, ಜಿ. ಶ್ರೀನಿವಾಸ ರಾವ್​ ಮತ್ತು ವಿಶ್ವೇಶ್ವರ್​ ಭಟ್​ ಅವರಿಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್​.ವಿ. ದೇಶಪಾಂಡೆ, ಸಿ.ಕೆ. ರಾಮಮೂರ್ತಿ, ಅರ್ಜುನ ಅವಧೂತ ಗುರೂಜಿ ಇತರರಿದ್ದರು. 
ರಾಜ್ಯ

ಒಗ್ಗಟ್ಟಿನಿಂದ ಬ್ರಾಹ್ಮಣರ ಸರ್ವಾಂಗೀಣ ಅಭಿವೃದ್ಧಿ| R.V. Deshpande

ಶ್ರವಣ್ ನೀರಬಿದಿರೆ
ಬೆಂಗಳೂರು: ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಬ್ರಾಹ್ಮಣರು ಒಟ್ಟಾಗಿ ಮುಂದುವರಿಯಬೇಕಾಗಿದೆ ಎಂದು ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್​.ವಿ. ದೇಶಪಾಂಡೆ ಹೇಳಿದ್ದಾರೆ.
ಕೆ.ಆರ್​. ರಸ್ತೆಯ ಗಾಯನ ಸಮಾಜದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಭಾನುವಾರ ಹಮ್ಮಿಕೊಂಡಿದ್ದ ವಿಪ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರು ಮುಂಚೂಣಿಯಲ್ಲಿದ್ದರು. ಆದರೆ, ಈ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಿದೆ. ಉತ್ತರ ಭಾರತದಲ್ಲಿ ಗಣನೀಯ ನಾಯಕರು ಇದ್ದರೂ, ರಾಜ್ಯದಲ್ಲಿ ಶಾಸಕರ ಸಂಖ್ಯೆ ಕಡಿಮೆಯಿದೆ. ಯುವಜನರು ಹೆಚ್ಚಾಗಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಬರಬೇಕಿದೆ. ಅದಕ್ಕಾಗಿ ನಾವು ಮಕ್ಕಳಲ್ಲಿ ಬ್ರಾಹ್ಮಣ ಸಮಾಜದ ಬಗ್ಗೆ ಅಭಿಮಾನ ಬೆಳೆಸಬೇಕಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಕೌಶಲಯುತ ಶಿಕ್ಷಣ ನೀಡಬೇಕು. ಸಂಟಿತರಾಗುವ ಮೂಲಕ ನಾವು ಅಭಿವೃದ್ಧಿ ಹೊಂದಿ, ಇತರ ಸಮಾಜದವರಿಗೂ ಒಳಿತು ಮಾಡಬೇಕು ಎಂದರು.

ಅಭಿವೃದ್ಧಿ ಯೋಜನೆಗಳು: 

ಸಂಘದ ರಾಜ್ಯಾಧ್ಯಕ್ಷ ಜಿ.ಆರ್​. ಪ್ರದಿಪ್​ ಮಾತನಾಡಿ, ಸಂಘದ ವತಿಯಿಂದ ಬ್ರಾಹ್ಮಣರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ವಟುಗಳ ಸಾಮೂಹಿಕ ಉಪನಯನಕ್ಕೆ ವ್ಯವಸ್ತೆ ಮಾಡಲಾಗುವುದು. ಅವರು ಐದು ವರ್ಷಗಳ ನಿರಂತರ ಸಂಧ್ಯಾವಂದನೆಯನ್ನು ಪಾಲಿಸಿದರೆ, ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸಂ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿಯಲ್ಲಿ ಸಮುದಾಯಕ್ಕೆ ಚಿಕಿತ್ಸೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗುವುದು. ಬ್ರಾಹ್ಮಣರ ಅವಹೇಳನ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪರುಶುರಾಮ ಲೀಗಲ್​ ಸೆಲ್​ ನಿರ್ಮಿಸಲಾಗುವುದು. ವೈವಾಹಿಕ ಸಮಸ್ಯೆಗಳ ಪರಿಹಾರಕ್ಕಾಗಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಗೋವಿಂದ ಕುಲಕರ್ಣಿ, ಪರಿಸರವಾದಿ ರೇವತಿ ಕಾಮತ್​ ಮತ್ತಿತರರು ಉಪಸ್ಥಿತರಿದ್ದರು. 

ಒಗ್ಗಟ್ಟಿನಿಂದ ಭವ್ಯ ಭಾರತ ನಿರ್ಮಾಣ 

 ವಿಪ್ರ ಎಂದರೆ ವಿವೇಕ ಪ್ರಜ್ಞೆ ಉಳ್ಳವ ಎಂದರ್ಥ. ಸಾವಿರಾರು ವರ್ಷದ ತಪಸ್ಸಿನ ಪುಣ್ಯದಿಂದ ಬ್ರಾಹ್ಮಣರಾಗಿ ಹುಟ್ಟಿದ್ದೇವೆ. ನಾವು ಹುಟ್ಟುತ್ತಲೇ ಮೆರಿಟ್​ ಜತೆ ಬಂದಿದ್ದೇವೆ. ಇಡೀ ವಿಶ್ವಕ್ಕೆ ಬೆಳಕನ್ನು ನೀಡುವ ಶಕ್ತಿಯನ್ನು ಭಗವಂತ ಹುಟ್ಟುವಾಗಲೇ ಕೊಟ್ಟಿದ್ದಾನೆ. ನಮ್ಮಲ್ಲಿ ಎಲ್ಲವೂ ಇದೆ. ಆದರೆ, ಒಗ್ಗಟ್ಟಿಲ್ಲ. ಬ್ರಾಹ್ಮಣರು ಯಾವಾಗ ಒಂದಾಗುತ್ತಾರೋ, ಅಂದು ಸ್ವಾಮೀ ವಿವೇಕಾನಂದರ ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದು ಮೈಸೂರಿನ ಶ್ರೀ ಅರ್ಜುನ ಅವಧೂತ ಗುರೂಜಿ ಹೇಳಿದರು.

ಭಾರ್ಗವಭೂಷಣ ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್​, ಉದ್ಯಮಿ ಆಶಾ ದಿನೇಶ್​, ಹರಿದಾಸ ಸಾಹಿತ್ಯ ಪ್ರಚಾರಕ ಅರಳುಮಲ್ಲಿಗೆ ಪಾರ್ಥಸಾರಥಿ, ಉದ್ಯಮಿ ಜಿ. ಶ್ರೀನಿವಾಸ ರಾವ್​ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ್​ ಭಟ್​ ಅವರಿಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.