ಹೊಸಕೋಟೆ ದೇವರಾಜ ಅರಸು ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 
ರಾಜ್ಯ

ಅರ್ಹರಿಗೆ ಸರ್ಕಾರಿ ಸವಲತ್ತು ತಲುಪಿಸುವುದೇ ಅಭಿವೃದ್ಧಿ / HOSAKOTE

ಹೊಸಕೋಟೆ :

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತು ತಲುಪಿಸುವುದೇ ನಿಜವಾದ ಅಭಿವೃದ್ಧಿ ಅಂದುಕೊಂಡು, ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದವರು ದೇವರಾಜ ಅರಸು ಎಂದು ತಾಲುಕು ದಂಡಾಧಿಕಾರಿ ಶೀತಲ್​ ತಿಳಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅರುಸು ಜಯಂತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ "ಉಳುವವನೆ ಭೂಮಿಯ ಒಡೆಯ' ಎನ್ನುವ ಕಾಂತ್ರಿಕಾರಿ ಯೋಜನೆ ಅನುಷ್ಠಾನಗೊಳಿಸಿ, ಅನೇಕ ಬದಲಾವಣೆ ತಂದ ಕೀರ್ತಿ ಅರಸುಗೆ ಸಲ್ಲುತ್ತದೆ. ಅರಸು ಅವರ ಆದರ್ಶ ಮತ್ತು ಜನಪರ ಕಾಳಜಿಯ ಗುಣಗಳನ್ನು ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕಿದೆ. ಇಂತಹ ನಾಯಕರ ಜಯಂತಿ ಆಚರಿಸುವ ಮೂಲಕ ಅವರ ಆದರ್ಶ ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಪ್ರಭಾರ ಅಧಿಕಾರಿ ಪ್ರೇಮ್​ ಕುಮಾರ್​ ಮಾತನಾಡಿ, ಈ ರಾಜ್ಯದ ಎಲ್ಲ ಸೌಲಭ್ಯ ವಂಚಿತರಿಗೆ, ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅವರ ಆಡಳಿತಾವಧಿಯಲ್ಲಿ 515 ವಸತಿ ನಿಲಯಗಳನ್ನು ಸ್ಥಾಪಿಸಿದ್ದು, ಇಂದು ರಾಜ್ಯಾದ್ಯಂತ 2560 ವಸತಿ ನಿಲಯಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೇನೆಗೆ ಸೇರ ಬಯಸುವವರಿಗೆ ಉಚಿತ ತರಬೇತಿ, ಸವಿತಾ ಸಮಾಜದವರಿಗೆ ನಾದಸ್ವರ ಡೊಳ್ಳು ತರಬೇತಿ, ಸ್ಪರ್ಧಾತ್ಮಕ ಪರೀೆಗಳ ತರಬೇತಿ ಜತೆಗೆ ಪಿಎಚ್​ಡಿ ಮಾಡುವವರಿಗೆ 3 ವರ್ಷ ಪ್ರತಿ ತಿಂಗಳು 10 ಸಾವಿರ ರೂ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಮಲಹೊರುವ ಪದ್ಧತಿ, ಜೀತಪದ್ಧತಿ ನಿಮೂರ್ಲನೆ ಮಾಡಿದ ಕೀರ್ತಿ ಅರಸುಗೆ ಸಲ್ಲುತ್ತದೆ. ಪ್ರಸ್ತುತ ತಾಲೂಕಿನಲ್ಲಿ 11 ವಸತಿ ನಿಲಯಗಳಿದ್ದು, 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚು ಅಂಕ ಪಡೆದ 10ನೇ ತರಗತಿ, ಪಿಯುಸಿ, ಪದವಿಯ 32 ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸನ್ಮಾನದ ಜತೆಗೆ ಬಹುಮಾನ ವಿತರಿಸಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿದ್ದೇಶ್​, ಪಶು ಇಲಾಖೆಯ ಡಾ.ಮಂಜುನಾಥ್​, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು, ಮೀನುಗಾರಿಕೆ ಇಲಾಖೆ ಸುಬ್ರಮಣಿ, ಕಾಂಗ್ರೆಸ್​ ಒಬಿಸಿ ಜಿಲ್ಲಾಧ್ಯಕ್ಷ ಸಿ.ಮುನಿಯಪ್ಪ, ಉಪಾಧ್ಯಕ್ಷ ಗೋಪಾಲ್​, ತಾಲೂಕು ಬ್ಲಾಕ್​ ಅಧ್ಯಕ್ಷ ಪೂಜಾರಾಮನಹಳ್ಳಿ ಶ್ರೀನಿವಾಸ್​, ನಗರ ಅಧ್ಯಕ್ಷ ಶ್ರೀಧರ್​, ಮಚಪ್ಪನಹಳ್ಳಿ ಮಂಜುನಾಥ್​, ನಾರಾಯಣಸ್ವಾಮಿ, ಲಕ್ಕೊಂಡಹಳ್ಳಿ ಮಂಜುನಾಥ್​ ಇತರರು ಇದ್ದರು.